ಮ್ಯಾನ್ಮಾರ್ ನಲ್ಲಿ 114 ನಾಗರಿಕರನ್ನು ಹತ್ಯೆಗೈದಿರುವ ಘಟನೆಗೆ ಜೋ ಬೈಡನ್ ಖಂಡನೆ
ವಾಷಿಂಗ್ಟನ್: ಮ್ಯಾನ್ಮಾರ್ ನಲ್ಲಿ ಮಿಲಿಟರಿ ಆಡಳಿತವು ಪ್ರಜಾಸತ್ತಾತ್ಮಕವಾಗಿ ಚುನಾಯಿತ ಸರಕಾರವನ್ನು ಉರುಳಿಸಿ, ಅಮಾಯಕ ನಾಗರಿಕರನ್ನು ಹತ್ಯೆಗೈದಿರುವ ಘಟನೆಯನ್ನು ಅಮೆರಿಕ ಅಧ್ಯಕ್ಷ ಜೋ ಬೈಡನ್ ತೀವ್ರವಾಗಿ ಖಂಡಿಸಿದ್ದಾರೆ.
ಇದು ಭಯಾನಕ. ನಿಜಕ್ಕೂ ಅತಿರೇಕದ ಘಟನೆ. ನನಗೆ ಲಭಿಸಿದ ವರದಿಗಳ ಪ್ರಕಾರ ಅನಗತ್ಯವಾಗಿ ನಾಗರಿಕರನ್ನು ಕೊಲೆ ಮಾಡಲಾಗಿದೆ ಎಂದು ಜೋ ಬೈಡೆನ್ ಹೇಳಿದ್ದಾರೆ. ಮ್ಮಾನ್ಮಾರ್ ನಲ್ಲಿ ಮಿಲಿಟರಿ ಆಡಳಿತವನ್ನು ವಿರೋಧಿಸಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ನಾಗರಿಕರ ಮೇಲೆ ಭದ್ರತಾ ಪಡೆಯು ಗುಂಡಿನ ದಾಳಿ ನಡೆಸಿದೆ. ಪರಿಣಾಮ ಶನಿವಾರ ಒಂದೇ ದಿನದಲ್ಲಿ 114 ಮಂದಿ ಹತ್ಯೆಗೀಡಾಗಿದ್ದಾರೆ.
ಫೆಬ್ರುವರಿ 1ರ ಸೇನಾದಂಗೆಯ ಬಳಿಕ ಇದುವರೆಗೆ ನಡೆದ ಹಿಂಸಾಚಾರದಲ್ಲಿ 440ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ. ಯಾಂಗೂನ್‌ನಲ್ಲಿರುವ ಅಮೆರಿಕದ ಕೇಂದ್ರದ ಮೇಲೂ ಮ್ಯಾನ್ಮಾರ್ ಭದ್ರತಾ ಪಡೆಗಳು ಗುಂಡಿನ ದಾಳಿ ನಡೆಸಿತ್ತು ಎಂಬುದು ವರದಿಯಾಗಿದೆ. ಈ ಕುರಿತು ತನಿಖೆ ನಡೆಸಲಾಗುವುದು ಎಂದು ಸದನದ ವಿದೇಶಾಂಗ ವ್ಯವಹಾರಗಳ ಸಮಿತಿಯ ಅಧ್ಯಕ್ಷರಾಗಿರುವ ಗ್ರೆಗರಿ ಮೀಕ್ಸ್ ಹೇಳಿದ್ದಾರೆ.
ರಾತ್ರಿ ವೇಳೆ ಬಾಲಕಿ ಕರೆದಳೆಂದು ಮನೆಗೆ ಹೋದ ಯುವಕ | ಬಳಿಕ ನಡೆದ್ದೇನು ಗೊತ್ತಾ?

























