9:18 PM Thursday 16 - October 2025

“3 ತಿಂಗಳ ಅವಧಿಯ ವಿದ್ಯುತ್ ಬಿಲ್ಲು, ನೀರಿನ ಬಿಲ್ಲು ಮನ್ನಾ ಮಾಡಬೇಕು”

dyfi
23/06/2021

ಮಂಗಳೂರು: ಕೊರೋನಾ ಕಾಲದ ಈ ಎರಡನೇ ಅಲೆಯಲ್ಲಿ ಸರಕಾರ ಘೋಷಿಸಿದ ಲಾಕ್ಡೌನ್ ನ ಈ ಸಂಕಷ್ಟದ ಕಾಲದಲ್ಲಿ ಜನರಿಗೆ ಉದ್ಯೋಗ ಇಲ್ಲದೆ ಅನ್ನ ,ನೀರಿಗೂ ಕೂಡಾ ಪರಿತಪಿಸುವ ಸ್ಥಿತಿ ನಿರ್ಮಾಣವಾಗಿದೆ. ಸರಕಾರದ ಈ ಲಾಕ್ ಡೌನ್ ಅವಧಿಯಲ್ಲಿ ಜನ ಸಾಮಾನ್ಯರಿಗೆ ಅನ್ನ ಕೊಡಲಿಲ್ಲ, ಅಕ್ಕಿ ಕೊಡಲಿಲ್ಲ, ಬೇಳೆ ಕೊಡಲಿಲ್ಲ, ನಮ್ಮ ಮಕ್ಕಳ ಶಾಲಾ ಫೀಸು ಕೊಡಲಿಲ್ಲ, ಬ್ಯಾಂಕಿಗೆ ಕಟ್ಟಬೇಕಾದ ಸಾಲದ ಕಂತನ್ನು ಬಿಡದೆ ವಸೂಲಿ ಮಾಡಿದಿರಿ, ಈಗ ಕನಿಷ್ಟ ಈ ಮೂರು ತಿಂಗಳ ಅವಧಿಯ ವಿದ್ಯುತ್ ಬಿಲ್ , ನೀರಿನ ಬಿಲ್ಲನ್ನಾದರೂ ಮನ್ನ ಮಾಡಬೇಕೆಂದು ಡಿವೈಎಫ್ ಐ ರಾಜ್ಯಾದ್ಯಕ್ಷರಾದ ಮುನೀರ್ ಕಾಟಿಪಳ್ಳ ಒತ್ತಾಯಿಸಿದರು.

ಡಿವೈಎಫ್ ಐ ರಾಜ್ಯಾದ್ಯಂತ ವಿದ್ಯುತ್ ದರ ಏರಿಕೆಯನ್ನು ವಿರೋಧಿಸಿ ಹಾಗೂ ಮೂರು ತಿಂಗಳ ಅವಧಿಯ ವಿದ್ಯುತ್ ಬಿಲ್ ಮನ್ನಾ ಮಾಡಬೇಕೆಂದು ಒತ್ತಾಯಿಸಿ ಕರೆ ನೀಡಿದ ಪ್ರತಿಭಟನೆಯ ಭಾಗವಾಗಿ ನಿನ್ನೆ ಕುಳಾಯಿಯಲ್ಲಿ ನಡೆದ ಪ್ರತಿಭಟನೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.

ಡಿವೈಎಫ್ ಐ ಕರ್ನಾಟಕ ರಾಜ್ಯ ಸಮಿತಿಯು ಕರ್ನಾಟಕ ರಾಜ್ಯ ಸರಕಾರ ಕೋವಿಡ್ ಕಾಲದಲ್ಲಿ ವಿದ್ಯುತ್ ದರ ಏರಿಕೆ ಮಾಡಿದ ಕ್ರಮವನ್ನು ವಿರೋಧಿಸಿ ಹಾಗೂ ಈ ಲಾಕ್ಡೌನ್ ಅವಧಿಯ ಮೂರು ತಿಂಗಳ ವಿದ್ಯುತ್ ಬಿಲ್ಲನ್ನು ಮನ್ನಾ ಮಾಡಬೇಕೆಂದು ಒತ್ತಾಯಿಸಿ “ಕತ್ತಲೆಯತ್ತ ಕರ್ನಾಟಕ” ಘೋಷಣೆಯಡಿಯಲ್ಲಿ  ದೊಂದಿ, ಲ್ಯಾಟೀನ್‌, ಚಿಮಣಿ, ದೀವಟಿಗೆ ಮುಂತಾದ ಹಳೆ ಪರಿಕರಗಳನ್ನು ಹಿಡಿದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ, ಗ್ರಾಮ, ಹಳ್ಳಿಗಳಲ್ಲಿ ಪ್ರತಿಭಟನೆಯನ್ನು ನಡೆಸಲು ಕರೆ ನೀಡಿತ್ತು.

ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು, ಉಳ್ಳಾಲ, ಬಂಟ್ವಾಳ, ಪುತ್ತೂರು, ಮೂಡಬಿದಿರೆ, ಬೆಳ್ತಂಗಡಿಯ ಸುಮಾರು 50 ಕಡೆಗಳಲ್ಲಿ ಒಟ್ಟು ರಾಜ್ಯದ ಇತರೆ ಮುನ್ನೂರಕ್ಕೂ ಅಧಿಕ ಪ್ರದೇಶಗಳಲ್ಲಿ ದೊಂದಿ, ಚಿಮಣಿ, ಗ್ಯಾಸ್ ಲೈಟುಗಳನ್ನು ಹಿಡಿದು ಡಿವೈಎಫ್ ಐ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version