ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಡಿ 40,50,351 ಸದಸ್ಯತ್ವ ನೋಂದಣಿ: ಡಾ.ಸಿ.ಎನ್.ಅಶ್ವತ್ಥನಾರಾಯಣ್
ಬೆಂಗಳೂರು: ಬಿಜೆಪಿ ವಿಜಯ ಸಂಕಲ್ಪ ಅಭಿಯಾನದಡಿ ಒಟ್ಟು 40,50,351 ಸದಸ್ಯತ್ವ ನೋಂದಣಿ ಮಾಡಿದ್ದೇವೆ ಎಂದು ರಾಜ್ಯದ ಉನ್ನತ ಶಿಕ್ಷಣ, ಐಟಿ & ಬಿಟಿ ಸಚಿವ ಹಾಗೂ ಅಭಿಯಾನದ ಸಂಚಾಲಕ ಡಾ.ಸಿ.ಎನ್.ಅಶ್ವತ್ಥನಾರಾಯಣ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಭಿಯಾನದಲ್ಲಿ 58,186 ಬೂತ್ ಪೈಕಿ 39,572 ಬೂತ್‍ಗಳ ಸಂಪರ್ಕ ಮಾಡಲಾಗಿದೆ. 22,55,562 ಮನೆಗಳ ಸಂಪರ್ಕ ಮಾಡಿದ್ದೇವೆ. 13,35,254 ಮನೆಗಳ ಮೇಲೆ ಸ್ಟಿಕರ್ ಅಂಟಿಸಲಾಗಿದೆ. 4,91,067 ವಾಹನಗಳ ಮೇಲೆ ಸ್ಟಿಕರ್ ಅಂಟಿಸಲಾಗಿದೆ. 1.94 ಲಕ್ಷ ಗೋಡೆ ಬರಹ ಮಾಡಲಾಗಿದೆ. 31,260 ಬೂತ್‍ಗಳಲ್ಲಿ ಮನ್ ಕಿ ಬಾತ್ ಅನ್ನು 5 ಲಕ್ಷ ಜನರು ಆಲಿಸಿದ್ದಾರೆ. ಅಲ್ಲದೆ, 32,489 ಡಿಜಿಟಲ್ ವಾಲ್ ಪೈಂಟಿಂಗ್ ಮಾಡಲಾಗಿದೆ ಎಂದು ವಿವರಿಸಿದರು.
ಬಿಜೆಪಿಯೇ ಭರವಸೆ ಎಂಬ ಅಭಿಯಾನ ಇದಾಗಿತ್ತು. ಕನಿಷ್ಠ 150 ಶಾಸಕರನ್ನು ಗೆಲ್ಲಲು ಇದು ಪೂರಕ. ಸಶಕ್ತ ಬೂತ್ ಮೂಲಕ ಬೂತ್ ವಿಜಯ ಅಭಿಯಾನ ನಡೆದಿದೆ. ಜನರ ಸಹಕಾರ, ಬೆಂಬಲ ಕೋರಿದ್ದೇವೆ ಎಂದು ತಿಳಿಸಿದರು. ತಾವು, ಪಕ್ಷದ ಪದಾಧಿಕಾರಿಗಳು ತಮ್ಮ ಜವಾಬ್ದಾರಿಗೆ ಅನುಗುಣವಾಗಿ ಭಾಗವಹಿಸಿದ್ದಾಗಿ ತಿಳಿಸಿದರು.
ಮಂಗಳೂರು– ಉಡುಪಿಯಲ್ಲಿ ಶೇ 100 ಮನೆಗಳ ಸಂಪರ್ಕ ಆಗಿದೆ. ದ್ವೀಪವಾಸಿಗಳನ್ನೂ ಸಂಪರ್ಕಿಸಲಾಗಿದೆ. ಕೊಡಗು, ಶಿವಮೊಗ್ಗ, ಮೈಸೂರಿನಲ್ಲಿ ಶೇ 100 ಮನೆ ಸಂಪರ್ಕ ನಡೆಸಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಕಾಡುಗಳಲ್ಲಿ ವಾಸಿಸುವ ಬುಡಕಟ್ಟು ಜನಾಂಗದವರನ್ನೂ ಸಂಪರ್ಕಿಸಲಾಗಿದೆ ಎಂದು ಅವರು ತಿಳಿಸಿದರು.
ವಿಜಯ ಸಂಕಲ್ಪ ಅಭಿಯಾನವು ಪೂರ್ಣಗೊಂಡಿದ್ದು, ಮನೆಮನೆ ತಲುಪುವ ನಿಟ್ಟಿನಲ್ಲಿ ಅದನ್ನು ಹಮ್ಮಿಕೊಳ್ಳಲಾಗಿತ್ತು. ಕೇಂದ್ರ- ರಾಜ್ಯ ಸರಕಾರಗಳ ಸಾಧನೆ ತಿಳಿಸುವುದು, ಗೋಡೆ ಬರಹ, ಕರಪತ್ರ ಹಂಚುವುದು, ಪಕ್ಷದ ಸದಸ್ಯತ್ವ ನೋಂದಣಿ ನಡೆದಿದೆ ಎಂದರು. 2 ಕೋಟಿ ಮನೆ, 1 ಕೋಟಿ ಸದಸ್ಯತ್ವ ನೋಂದಣಿ ಗುರಿ ಇತ್ತು ಎಂದು ವಿವರಿಸಿದರು.
ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಕಾರ್ಯಕ್ರಮಕ್ಕೆ ಚಾಲನೆ ಕೊಟ್ಟರು. ಅಲ್ಲದೆ ಸಾಮಾನ್ಯ ಕಾರ್ಯಕರ್ತರಂತೆ ಸಕ್ರಿಯವಾಗಿ ಅಭಿಯಾನದಲ್ಲಿ ಪಾಲ್ಗೊಂಡಿದ್ದರು. ಜನವರಿ 21ರಿಂದ ಫೆಬ್ರವರಿ 5ರವರೆಗೆ ಅಭಿಯಾನ ಅವಧಿಯನ್ನು ನಿಗದಿಗೊಳಿಸಿದ್ದೆವು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನೆಲಮಂಗಲದ ಬಳಿ ಚಾಲನೆ ನೀಡಿದ್ದರು. ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ಬೆಂಗಳೂರಿನಲ್ಲಿ ಚಾಲನೆ ಕೊಟ್ಟಿದ್ದರು ಎಂದು ತಿಳಿಸಿದರು.
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅರುಣ್ ಸಿಂಗ್, ರಾಜ್ಯದ ಸಚಿವರು, ಎಲ್ಲ ಚುನಾಯಿತ ಪ್ರತಿನಿಧಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಎಲ್ಲ ಮೋರ್ಚಾಗಳು, ಪ್ರಕೋಷ್ಠಗಳು ಅಭಿಯಾನದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದವು ಎಂದರು.
ಮುಖ್ಯಮಂತ್ರಿ, ರಾಜ್ಯಾಧ್ಯಕ್ಷರ ನಾಯಕತ್ವ ಮತ್ತು ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಚುನಾವಣೆಗೆ ಹೋಗಲಿದ್ದೇವೆ. ಜಾತಿ- ಧರ್ಮ ಮೀರಿದ ಪಕ್ಷ ನಮ್ಮದು. ಹೆಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆ ಮತ್ತು ಕೀಳುಮಟ್ಟದ ರಾಜಕೀಯ ಖಂಡನೀಯ ಎಂದು ಪ್ರಶ್ನೆಗೆ ಉತ್ತರವಾಗಿ ತಿಳಿಸಿದರು. ಅವರು ಕ್ಷಮೆ ಯಾಚಿಸಲಿ ಎಂದು ಆಗ್ರಹಿಸಿದರು.
ಧರ್ಮಾತೀತವಾಗಿ ನಾವು ಕೆಲಸ ಮಾಡುತ್ತೇವೆ. ಹೆಚ್.ಡಿ.ಕುಮಾರಸ್ವಾಮಿ ಅವರು ತಾವು ನೀಡಿರುವ “ಬ್ರಾಹ್ಮಣ ಸಿಎಂ” ಹೇಳಿಕೆಗೆ ಸ್ಪಷ್ಟನೆ ನೀಡಿದ್ದಲ್ಲದೇ ಅವರೇ ತಮ್ಮ ಹೇಳಿಕೆಯಿಂದ ವಿಚಲಿತರಾಗಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಉತ್ತರ ಕೊಟ್ಟರು. ಜಾತಿ ವಿರುದ್ಧ ಕೊಟ್ಟ ಹೇಳಿಕೆಯನ್ನು ಖಂಡಿಸುತ್ತಿದ್ದು, ಕ್ಷಮೆ ಯಾಚಿಸಬೇಕೆಂದು ಆಗ್ರಹಿಸಿದರು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ಅಭಿಯಾನದ ರಾಜ್ಯ ಸಹ ಸಂಚಾಲಕ ಸಿದ್ದರಾಜು, ರಾಜ್ಯ ಉಪಾಧ್ಯಕ್ಷ ನಂದೀಶ್, ರಾಜ್ಯ ಕಾರ್ಯದರ್ಶಿ ಜಗದೀಶ್ ಹಿರೇಮನಿ ಅವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/H1J7NYrbnAi7fQ7rqJsLYg
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

























