ಬಾಡಿಗೆಗಿದ್ದ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; 60 ವರ್ಷದ ಮನೆ ಮಾಲೀಕನ ಬಂಧನ
ಬೆಂಗಳೂರು: ತನ್ನ ಮನೆಯಲ್ಲಿ ಬಾಡಿಗೆಗಿದ್ದ 20 ವರ್ಷದ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ 60 ವರ್ಷದ ಮನೆ ಮಾಲೀಕನನ್ನು ಬೆಂಗಳೂರಿನ ಅಶೋಕನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಕಮಲೇಶ್ ಕುಮಾರ್ (60) ಎಂದು ಗುರುತಿಸಲಾಗಿದೆ. ಶನಿವಾರ ಸಂಜೆ ಸುಮಾರು 6:25ರ ವೇಳೆಗೆ ಮನೆಯಲ್ಲಿದ್ದ ರಿಪೇರಿ ಕೆಲಸಗಳನ್ನು ಪರಿಶೀಲಿಸುವ ನೆಪದಲ್ಲಿ ಕಮಲೇಶ್ ಕುಮಾರ್ ವಿದ್ಯಾರ್ಥಿನಿಯ ಮನೆಗೆ ಬಂದಿದ್ದಾನೆ. ಆರಂಭದಲ್ಲಿ ಆಕೆಯ ವಿದ್ಯಾಭ್ಯಾಸ ಮತ್ತು ಕಾಲೇಜಿನ ಬಗ್ಗೆ ಮಾತನಾಡಿದ ಆರೋಪಿ, ನಂತರ ಆಕೆಯ ಕೈಯಲ್ಲಿದ್ದ ಮೆಹಂದಿ ನೋಡುವ ನೆಪದಲ್ಲಿ ವಿದ್ಯಾರ್ಥಿನಿಯ ಕೈ ಹಿಡಿದು ತನ್ನತ್ತ ಎಳೆದುಕೊಂಡಿದ್ದಾನೆ.
ವಿದ್ಯಾರ್ಥಿನಿ ತೀವ್ರ ಪ್ರತಿರೋಧ ಒಡ್ಡಿದರೂ ಲೆಕ್ಕಿಸದೆ ಲೈಂಗಿಕ ಕಿರುಕುಳ ನೀಡಿದ್ದಾನೆ. ಅಲ್ಲದೆ, ಖಾಸಗಿಯಾಗಿ ಮತ್ತೆ ಭೇಟಿಯಾಗುವಂತೆ ಒತ್ತಾಯಿಸಿ ಅಸಭ್ಯವಾಗಿ ಮಾತನಾಡಿದ್ದಾನೆ ಎಂದು ಸಂತ್ರಸ್ತೆ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಯಿಂದ ಆಘಾತಕ್ಕೊಳಗಾದ ಯುವತಿ ತಕ್ಷಣವೇ ಅಶೋಕನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಸಂತ್ರಸ್ತೆಯ ಲಿಖಿತ ದೂರಿನ ಆಧಾರದ ಮೇಲೆ ಭಾರತೀಯ ನ್ಯಾಯ ಸಂಹಿತೆ (BNS), 2023ರ ಸೆಕ್ಷನ್ 74 ಮತ್ತು 75(2)ರ ಅಡಿಯಲ್ಲಿ ಪ್ರಕರಣ (FIR) ದಾಖಲಿಸಿಕೊಂಡಿರುವ ಪೊಲೀಸರು, ಆರೋಪಿಯನ್ನು ಬಂಧಿಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























