ಆಟವಾಡುವಾಗ ಗೇಟ್ ಸಮೇತ ಕುಸಿದುಬಿದ್ದ ಕಾಂಪೌಂಡ್ ಗೋಡೆ; 5 ವರ್ಷದ ಪುಟಾಣಿ ಸಾವು

bagaluru
18/06/2026

ಬೆಂಗಳೂರು: ರಾಜಧಾನಿಯ ಉತ್ತರ ತಾಲೂಕಿನ ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅತ್ಯಂತ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ನೆರೆಮನೆಯ ಮಕ್ಕಳೊಂದಿಗೆ ಆಟವಾಡುತ್ತಿದ್ದಾಗ ಮನೆಯೊಂದರ ಕಾಂಪೌಂಡ್ ಗೋಡೆ ಮತ್ತು ಕಬ್ಬಿಣದ ಗೇಟ್ ಒಮ್ಮೆಗೆ ಉರುಳಿಬಿದ್ದ ಪರಿಣಾಮ 5 ವರ್ಷದ ಪುಟಾಣಿ ಮಗು ಮೃತಪಟ್ಟಿದ್ದು, ಮತ್ತೊಂದು ಮಗು ಗಂಭೀರವಾಗಿ ಗಾಯಗೊಂಡಿದೆ.

ಯಾದಗಿರಿ ಮೂಲದ ದಾವಲ್ ಸಾಬ್ ಅವರ ಪುತ್ರ ಅಫೀನ್ (5) ಮೃತಪಟ್ಟ ದುರ್ದೈವಿ ಮಗುವಾಗಿದ್ದಾನೆ. ವೃತ್ತಿಯಲ್ಲಿ ಕ್ಯಾಬ್ ಚಾಲಕರಾಗಿರುವ ದಾವಲ್ ಸಾಬ್ ಅವರು ಬೆಂಗಳೂರಿನಲ್ಲಿ ಹೊಸ ಕೆಲಸದ ಹುಡುಕಾಟದಲ್ಲಿದ್ದರು. ಅವರ ಪತ್ನಿ ಹಾಗೂ ಮಗು ಅಫೀನ್ ಕೇವಲ ಐದು ದಿನಗಳ ಹಿಂದಷ್ಟೇ ಬಾಗಲೂರು ವ್ಯಾಪ್ತಿಯ ಬಂಡಿಕೊಡಿಗೇಹಳ್ಳಿಯಲ್ಲಿರುವ ತಮ್ಮ ತಂಗಿಯ ಮನೆಗೆ ಬಂದಿದ್ದರು.

ಬುಧವಾರ ಸಂಜೆ ಸುಮಾರು 6:30ರ ವೇಳೆಗೆ, ಅಫೀನ್ ಪಕ್ಕದ ಮನೆಯ ಮಕ್ಕಳಾದ ಸಮನ್ವಿ ಹಾಗೂ ಮತ್ತೊಂದು ಮಗುವಿನೊಂದಿಗೆ ಬಿ.ಸಿ. ನರಸಪ್ಪ ಎಂಬುವರ ಮನೆಯ ಕಾಂಪೌಂಡ್ ಗೇಟ್ ಬಳಿ ಆಟವಾಡುತ್ತಿದ್ದನು. ಮಕ್ಕಳು ಆಟದ ಭರದಲ್ಲಿ ಕಬ್ಬಿಣದ ಗೇಟ್ ಹಿಡಿದು ಜೀಕಾಡುತ್ತಿದ್ದಾಗ, ಗೇಟ್‌ನ ಭಾರ ತಾಳಲಾರದೆ ಕಾಂಪೌಂಡ್ ಗೋಡೆಯು ಗೇಟ್ ಸಮೇತ ಒಮ್ಮೆಲೇ ಮಕ್ಕಳ ಮೇಲೆ ಕುಸಿದು ಬಿದ್ದಿದೆ.

ಘಟನೆಯನ್ನು ಕಂಡು ತಕ್ಷಣವೇ ಓಡಿ ಬಂದ ಸ್ಥಳೀಯರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದ ಮಕ್ಕಳಿಬ್ಬರನ್ನು ಹೊರತೆಗೆದು ಖಾಸಗಿ ಆಸ್ಪತ್ರೆಗೆ ಸಾಗಿಸಲು ಮುಂದಾಗಿದ್ದಾರೆ. ಆದರೆ, ತಲೆ ಹಾಗೂ ಎದೆಯ ಭಾಗಕ್ಕೆ ತೀವ್ರವಾಗಿ ಪೆಟ್ಟಾಗಿದ್ದ ಅಫೀನ್ ಆಸ್ಪತ್ರೆ ತಲುಪುವ ಮಾರ್ಗಮಧ್ಯದಲ್ಲೇ ಕೊನೆಯುಸಿರೆಳೆದಿದ್ದಾನೆ. ತೀವ್ರವಾಗಿ ಗಾಯಗೊಂಡಿರುವ ಮತ್ತೊಂದು ಮಗು ಸಮನ್ವಿಗೆ ಸದ್ಯ ಖಾಸಗಿ ಆಸ್ಪತ್ರೆಯಲ್ಲಿ ತುರ್ತು ಚಿಕಿತ್ಸೆ ನೀಡಲಾಗುತ್ತಿದೆ.

ವಿಷಯ ತಿಳಿಯುತ್ತಿದ್ದಂತೆ ಬಾಗಲೂರು ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಾಂಪೌಂಡ್ ಗೋಡೆಯ ಅವೈಜ್ಞಾನಿಕ ನಿರ್ಮಾಣವೇ ಈ ದುರಂತಕ್ಕೆ ಕಾರಣ ಎಂದು ಪ್ರಾಥಮಿಕವಾಗಿ ತಿಳಿದುಬಂದಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version