ಮೈಲಾರಲಿಂಗ ಸ್ವಾಮಿ ಹೆಸರಲ್ಲಿ ಮನೆಗೇ ನುಗ್ಗುತ್ತಿದೆ ನಾಲ್ವರ ತಂಡ:  ಒಂಟಿ ಮನೆಗಳೇ  ಇವರ ಟಾರ್ಗೆಟ್

05/01/2025

ಚಿಕ್ಕಮಗಳೂರು:  ಮೈಲಾರಲಿಂಗ ಸ್ವಾಮಿ ಹೆಸರಲ್ಲಿ ಊರೂರು ಸುತ್ತುತ್ತಿರುವ ತಂಡವೊಂದು ಮೂಡಿಗೆರೆ ತಾಲೂಕಿನಲ್ಲಿ ಆತಂಕ ಸೃಷ್ಟಿಸಿದೆ. ಮೈಲಾರಲಿಂಗ ಸ್ವಾಮಿ ಹೆಸರಲ್ಲಿ ಒಂಟಿ ಮನೆಗಳನ್ನೇ ಈ ತಂಡ ಟಾರ್ಗೆಟ್  ಮಾಡುತ್ತಿದೆ. ಇವರ ಚಲನವಲನಗಳು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

ಮೈಲಾರಲಿಂಗ ಒಕ್ಕಲಿನ ಬಟ್ಟೆ ಧರಿಸಿ ಒಂಟಿ ಮನೆಗಳು ಹಾಗೂ ಮಹಿಳೆಯರನ್ನೇ ಟಾರ್ಗೆಟ್ ಮಾಡಿ ಈ ತಂಡ ನೇರವಾಗಿ ಮನೆಗಳಿಗೆ ನುಗ್ಗುತ್ತಿವೆ. ಮನೆಯವರು ಬಾಗಿಲು ತೆಗೆಯುವವರೆಗೂ, ಮನೆ ಮಾಲಿಕರ ಅನುಮತಿಗೂ ಕಾಯದೇ,  ನೇರವಾಗಿ ತಾವೇ ಮನೆಯ ಬಾಗಿಲನ್ನು ತೆರೆದು ನುಗ್ಗುತ್ತಿದ್ದು, ಮಹಿಳೆಯರನ್ನು ದೇವರು ಎಂದೆಲ್ಲ ಬೆದರಿಸಿ ಹಣ ಪಡೆದು ಹೋಗುತ್ತಿದ್ದಾರೆ ಎಂದು ಹೇಳಲಾಗಿದೆ.

ಸಾಮಾನ್ಯವಾಗಿ ದೇವರ ಹೆಸರು ಹೇಳಿ, ಹಣ ಸಂಗ್ರಹಿಸುವವರು ಮನೆಯ ಒಳಗೆ ನುಗ್ಗುವುದಿಲ್ಲ. ಅಂಗಳದಲ್ಲೇ ಮಾತನಾಡಿ ಕೊಟ್ಟಷ್ಟು ಪಡೆದು ತೆರಳುತ್ತಾರೆ. ಆದರೆ ಈ ತಂಡ ಅಧಿಕಾರದಿಂದ ಮನೆಗೆ ನುಗ್ಗುತ್ತಿವೆ. ಹೀಗಾಗಿ ಇದು ಸಹಜ ನಡೆಯಲ್ಲ, ಇದರಲ್ಲಿ ಏನೋ ಇದೆ ಎಂದು ಸಾರ್ವಜನಿಕರಿಗೆ ಅನುಮಾನ ಮೂಡಿದೆ.

ಗೌಡ್ರೆ, ಅಮ್ಮ, ಅಮ್ಮಾವ್ರೆ, ಅವ್ವ, ಸರ್, ಮಾಲೀಕರೇ, ಅಪ್ಪಾಜಿ ಅಂತೆಲ್ಲಾ ಮನೆಯವರು ಹೊರ ಬರೋವರ್ಗೂ ಕೂಗ್ತಾರೆ, ಮನೆಯವರು ಬಾಗಿಲು ತೆರೆಯುತ್ತಿದ್ದಂತೆಯೇ ಮನೆ ಮಾಲಿಕರ ಅನುಮತಿಗೂ ಕಾಯದೇ ಮಾತನಾಡುತ್ತಲೇ ಮನೆಗೆ ನುಗ್ಗುತ್ತಿದ್ದಾರೆ.

ಮೂಡಿಗೆರೆ ತಾಲೂಕಿನ ಬಿದರಹಳ್ಳಿ ಸಮೀಪದ ಬಾಳೆಹಳ್ಳಿ ರಮೇಶ್ ಗೌಡ ಅವರ ಮನೆಗೆ ಬಂದಿದ್ದ ನಾಲ್ವರ ಚಲನವಲನಗಳು ಅನುಮಾನಕ್ಕೀಡು ಮಾಡಿದೆ. ಸಿಸಿ ಕ್ಯಾಮರಾಗಳಿರುವ ಮನೆಗಳಲ್ಲಿಯೇ ಈ ನಾಲ್ವರು ಈ ರೀತಿಯ ವರ್ತನೆ ತೋರಿದ್ದಾರೆ. ಸಿಸಿ ಕ್ಯಾಮರಾವನ್ನು ಗಮನಿಸುತ್ತಿದ್ದಾರೆ. ಮನೆಯ ಆಸುಪಾಸು ನೋಡಿ ತೆರಳುತ್ತಿದ್ದಾರೆ.

ಮನೆಯವರು ಬಾಗಿಲು ತೆರೆಯುತ್ತಿದ್ದಂತೆಯೇ ಮೊದಲು ಇಬ್ಬರು ಮನೆಯೊಳಗೆ ನುಗ್ಗುತ್ತಾರೆ. ಇನ್ನಿಬ್ಬರು ಮನೆಯ ಹೊರಗೆ ಕಾಯುತ್ತಾ, ಸುತ್ತಮುತ್ತಲಿನ ಪ್ರದೇಶವನ್ನು ವಾಚ್ ಮಾಡುತ್ತಿರುವುದು ಸಿಸಿ ಕ್ಯಾಮರಾಗಳಲ್ಲಿ ಸೆರೆಯಾಗಿದೆ.

ಸದ್ಯದ ಮಾಹಿತಿಯಂತೆ ಈ ತಂಡ ಒಂಟಿ ಮನೆಯೊಳಗೆ ನುಗ್ಗಿ ಒಂಟಿ ಮಹಿಳೆಯರನ್ನೇ ಟಾರ್ಗೆಟ್ ಮಾಡುತ್ತಿದ್ದು, ಹೆಣ್ಣು ಮಕ್ಕಳನ್ನು ದೇವರ ಹೆಸರಿನಲ್ಲಿ ಬೆದರಿಸಿ ಹಣ ಪೀಕುತ್ತಿದೆ. ಆದರೆ, ಈ ತಂಡದಲ್ಲಿ ಒಟ್ಟು ನಾಲ್ವರಿದ್ದಾರೆ. ಇವರು ಯಾವುದೇ ಮನೆಗೆ ನುಗ್ಗಿ ಇನ್ನೇನಾದರೂ ಅನಾಹುತ ಮಾಡಬಹುದು ಎನ್ನುವ ಅನುಮಾನಗಳು ಕೇಳಿ ಬಂದಿವೆ. ಮನೆಯೊಳಗೆ ನುಗ್ಗಿ ಒಂಟಿ ಮಹಿಳೆಯರಿರುವ ಮನೆಗಳಲ್ಲಿ ಕಳ್ಳತನ, ದರೋಡೆಯಂತಹ ಘಟನೆಗಳು ನಡೆಯುವ ಸಾಧ್ಯತೆಗಳ ಬಗ್ಗೆ ಅನುಮಾನಗಳು ವ್ಯಕ್ತವಾಗುತ್ತಿವೆ. ಈ ತಂಡ ಎಲ್ಲೇ ಕಂಡರೂ ಪೊಲೀಸರಿಗೆ ಮಾಹಿತಿ ನೀಡುವಂತೆ  ಮಲೆನಾಡಿಗರು ಮನವಿ ಮಾಡಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ

Exit mobile version