10:34 AM Wednesday 20 - August 2025

ದೊಡ್ಡ ರೈಲ್ವೇ ದುರಂತವನ್ನು ತಪ್ಪಿಸಿದ ಬಾಲಕ: ತಾನು ತೊಟ್ಟಿದ್ದ ಕೆಂಪು ಬಟ್ಟೆಯನ್ನು ಹಿಡಿದು ಸಮಯಪ್ರಜ್ಞೆ ಮೆರೆದ ಮುಸ್ಲಿಂ ಹುಡುಗ

27/09/2023

ಆತ ಇನ್ನೂ ಮೀಸೆ ಚಿಗುರದ ಬಾಲಕ. ಆಟ ಆಡುವ ವಯಸ್ಸು. ಆದರೆ ಆತನ ಬುದ್ದಿವಂತಿಕೆ ಅನೇಕ ಜೀವಗಳನ್ನೇ ಕಾಪಾಡಿದೆ. ಹೌದು. ಬಾಲಕನ ಸಮಯಪ್ರಜ್ಞೆಯಿಂದ ಬಹುದೊಡ್ಡ ರೈಲು ಅವಘಡವೊಂದು ಪಶ್ಚಿಮ ಬಂಗಾಳದಲ್ಲಿ ತಪ್ಪಿದೆ‌. ಅಂದಹಾಗೇ ಆ ಬಾಲಕನ ಹೆಸರು ಮುರ್ಸಲೀನ್ ಶೇಖ್. 12 ವರ್ಷದ ಈ ಬಾಲಕ ಹೊಲದಲ್ಲಿ ಕೆಲಸ ಮಾಡುವ ಕಾರ್ಮಿಕನ ಮಗ. ತಂದೆಯೊಂದಿಗೆ ಹೊಲಕ್ಕೆ ಬಂದಿದ್ದ ಮುರ್ಸಲಿನ್ ರೈಲ್ವೆ ಹಳಿಯ ಒಂದು ಭಾಗವು ಹಾನಿಯಾಗಿರುವುದನ್ನು ಗಮನಿಸಿದ್ದಾನೆ. ಇನ್ನೇನು ರೈಲು ಬಂದೇ ಬಿಡುತ್ತದೆ ಏನು ಮಾಡುವುದು ಎಂದು ಆಲೋಚಿಸಿ ತಕ್ಷಣ ತಾನು ಧರಿಸಿದ್ದ ಕೆಂಪು ಟಿ ಶರ್ಟ್​ ತೆಗೆದು ರೈಲು ಬರುತ್ತಿದ್ದ ಕಡೆಗೆ ಬೀಸಿದ್ದಾನೆ.

ರೈಲಿನ ಲೊಕೊಮೊಟಿವ್ ಪೈಲಟ್ ಸಿಗ್ನಲ್ ಗುರುತಿಸಿ ತುರ್ತು ಬ್ರೇಕ್ ಹಾಕಿದ್ದರಿಂದ ಅಪಘಾತ ತಪ್ಪಿದೆ. ಕಳೆದೊಂದು ವಾರದಿಂದ ಆ ಭಾಗದಲ್ಲಿ ಭಾರಿ ಮಳೆಯಾಗಿತ್ತು. ಇದರಿಂದಾಗಿ ರೈಲು ಹಳಿ ಹಾಳಾಗಿತ್ತು. ಬಾಲಕನ ಸಮಯಪ್ರಜ್ಞೆಯಿಂದ ಅಪಘಾತ ತಪ್ಪಿದೆ, ಜತೆಗೆ ಜನರ ಜೀವವೂ ಉಳಿದಿದೆ ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಅಧಿಕಾರಿಗಳು ಬಾಲಕನನ್ನು ಗುರುತಿಸಿ ಶೌರ್ಯ ಪ್ರಮಾಣಪತ್ರವನ್ನು ನೀಡಿ ಗೌರವಿಸಿದ್ದಾರೆ. ಜೊತೆಗೆ ನಗದು ಬಹುಮಾನವನ್ನು ಸಹ ನೀಡಿದರು. ಸ್ಥಳೀಯ ಸಂಸದರು ಮತ್ತು ವಿಭಾಗೀಯ ರೈಲು ವ್ಯವಸ್ಥಾಪಕರು ಬಾಲಕನ ಮನೆಗೆ ಭೇಟಿ ನೀಡಿ ಅಭಿನಂದಿಸಿದರು. ಏತನ್ಮಧ್ಯೆ, ಹಳಿಗಳ ಹಾನಿಗೊಳಗಾದ ಭಾಗವನ್ನು ಸರಿಪಡಿಸಿ ಕಾರ್ಯಾಚರಣೆಯನ್ನು ಪುನರಾರಂಭಿಸಲಾಗಿದೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ

Exit mobile version