4:06 PM Wednesday 15 - October 2025

ಕುದಿಯೋ ಎಣ್ಣೆ, ತುಪ್ಪಕ್ಕೆ ಕೈಹಾಕಿ ಫೇಮಸ್ ಆದ ಬಾಬಾ, ಹೆಣ್ಣಿನ ತಂಟೆಗೆ ಹೋಗಿ ಕೆಟ್ಟ!

baba asif jagidara
12/07/2021

ಗದಗ: ಕುದಿಯೋ ಎಣ್ಣೆ ಹಾಗೂ ಸುಡುವ ತುಪ್ಪಕ್ಕೆ ಕೈಹಾಕಿ ಭರ್ಜರಿ ಪವಾಡ ಮಾಡುತ್ತಿದ್ದ ಬಾಬಾನೋರ್ವ ಮಹಿಳೆಯ ವಿಚಾರಕ್ಕೆ ಕೈಹಾಕಿ ಕೆಟ್ಟಿದ್ದು, ಬಾಬಾನಿಗೆ ಸಂತ್ರಸ್ತ ಮಹಿಳೆ ಹಾಗೂ ಕುಟುಂಬಸ್ಥರು ಧರ್ಮದೇಟು ನೀಡಿದ ಘಟನೆ ವರದಿಯಾಗಿದೆ.

ಗದಗದ ಆಶ್ರಯ ಕಾಲೋನಿಯಲ್ಲಿ ಈ ಘಟನೆ ನಡೆದಿದ್ದು,   ಆಸೀಫ್ ಜಾಗಿರದಾರ ಎಂಬ ಬಾಬಾನಿಗೆ ಎಲ್ಲ ಬಾಬಾಗಳಂತೆಯೇ ಮೈಮೇಲೆ ದೇವರು ಬರುತ್ತಿತ್ತಂತೆ! ಎಲ್ಲ ಬಾಬಾಂದಿರು ಹೇಗೆ ನಿಂಬೆ ಹಣ್ಣು, ಬೂದಿ ಕೊಟ್ಟು ಸಮಸ್ಯೆ ಇತ್ಯರ್ಥ ಮಾಡುತ್ತಿದ್ದರೋ ಹಾಗೆಯೇ ಈ ಬಾಬನೂ ಜನರ ಸಮಸ್ಯೆ ಇತ್ಯರ್ಥ ಮಾಡುತ್ತಿದ್ದ ಎನ್ನಲಾಗಿದೆ.

ಬಹಳ ಪವರ್ ಫುಲ್ ಬಾಬಾ ಆಗಿರುವುದರಿಂದ ತನ್ನ ಬಳಿಗೆ ಬರುವ ಭಕ್ತರಿಂದ ಬಾಬಾಗೆ ಒಳ್ಳೆಯ ಆದಾಯ ಕೂಡ ಇತ್ತು ಎನ್ನಲಾಗಿದೆ.  ಸುಡುವ ಎಣ್ಣೆಗೆ ಕೈ ಹಾಕಿ ಬಿಸಿ ಬಿಸಿ ಬಜ್ಜಿಯನ್ನು ಕೈಯಲ್ಲಿ ತೆಗೆದು ಭಾರೀ  ಪವಾಡಗಳನ್ನು ಮಾಡುತ್ತಿದ್ದ ಬಾಬಾನ ಸಾಧನೆಯನ್ನು ನೋಡಿ ಜನರು ಮೂಕ ವಿಸ್ಮಿತರಾಗುತ್ತಿದ್ದರು. ಹೀಗೆ ಬಾಬಾ ಕೇಳಿದಷ್ಟು ಹಣವನ್ನು ಭಕ್ತರು ನೀಡುತ್ತಿದ್ದರಂತೆ!

ವಿನಾಶ ಕಾಲೇ ವಿಪರೀತ ಬುದ್ಧಿ ಎನ್ನುವಂತೆಯೇ, ಒಳ್ಳೆಯ ಆದಾಯ ಬರುತ್ತಿರುವ ಸಂದರ್ಭದಲ್ಲಿಯೇ ಬಾಬಾನಿಗೆ ಕೆಟ್ಟ ಬುದ್ಧಿಯೊಂದು ಬಂದಿದ್ದು,  ಸಮಸ್ಯೆ ಹೇಳಲು ಬಂದಿದ್ದ ಮಹಿಳೆಯೊಬ್ಬರಿಗೆ ತಡ ರಾತ್ರಿ ಕರೆ ಮಾಡಿ ಅಸಭ್ಯ ಮಾತನಾಡಿದ್ದ ಬಾಬಾ ಇದೀಗ ತಾನಾಗಿಯೇ ತನಗೆ ಸಮಸ್ಯೆ ತಂದುಕೊಂಡಿದ್ದಾನೆ. ಬಾಬಾನ ಇನ್ನೊಂದು ಮುಖ ಬಯಲಾಗುತ್ತಿದ್ದಂತೆಯೇ ಮಹಿಳೆ ತನ್ನ ಕುಟುಂಬಸ್ಥರೊಂದಿಗೆ ಆಗಮಿಸಿ ಬಾಬಾನಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ ಎಂದು ಹೇಳಲಾಗಿದ್ದು, ಇನ್ನೂ ಸಿಕ್ಕಿದ್ದೇ ಚಾನ್ಸು ಎಂಬಂತೆ  ಸ್ಥಳೀಯರು ಕೂಡ ಬಾಬಾನಿಗೆ ನಾಲ್ಕೇಟು ಬಿಗಿದಿದ್ದಾರೆ ಎಂದು ವರದಿಯಾಗಿದೆ.

ನಾನು ಮಾಡಿದ್ದು ಮೋಸ, ನನ್ನಿಂದ ತಪ್ಪಾಗಿದೆ ಕ್ಷಮಿಸಿ ಬಿಡಿ ಎಂದು ಬಾಬಾ ಹೇಳಿದರೂ ಕೇಳದೇ ಬಾಬಾನಿಗೆ ಹಿಗ್ಗಾಮುಗ್ಗಾ ಥಳಿಸಲಾಗಿದೆ. ಘಟನೆ ಗದಗ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ಹೇಳಲಾಗಿದೆ.

ಇತ್ತೀಚಿನ ಸುದ್ದಿ

Exit mobile version