ಚಾಮರಾಜನಗರಕ್ಕೆ ಬಿ.ಎಲ್.ಸಂತೋಷ್ ಭೇಟಿ ನೀಡಿದ್ದೇಕೆ?: ಇಲ್ಲಿದೆ ಕಂಪ್ಲೀಟ್ ಸ್ಟೋರಿ
ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ 3 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪ್ರಜಾಧ್ವನಿ ಯಾತ್ರೆ ನಡೆದ ಬಳಿಕ ಚಾಮರಾಜನಗರಕ್ಕೆ ರಾಜಕೀಯ ಚಾಣಕ್ಯ ಬಿ.ಎಲ್.ಸಂತೋಷ್ ಎಂಟ್ರಿ ಕೊಟ್ಟು ಪಕ್ಷದ ಪ್ರಮುಖರ ಜೊತೆ ಸಭೆ ನಡೆಸಿದ್ದಾರೆ.
ಚಾಮರಾಜನಗರದ ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರು ಮಾಧ್ಯಮದವರನ್ನು ಹೊರಗಿಟ್ಟು ಸಭೆ ನಡೆಸಿದ್ದು ಇದರಲ್ಲಿ ಸಂಸದ ವಿ.ಶ್ರೀನಿವಾಸಪ್ರಸಾದ್, ಬಿಜೆಪಿ ಶಾಸಕರಾದ ಎನ್.ಮಹೇಶ್, ನಿರಂಜನಕುಮಾರ್, ಟಿಕೆಟ್ ಆಕಾಂಕ್ಷಿಗಳಾದ ಎಂ.ರಾಮಚಂದ್ರು, ನಿಶಾಂತ್, ವೆಂಕಟೇಶ್, ಡಾ.ಪ್ರೀತಂ ಹಾಗೂ ಮಂಡಲ ಪ್ರಮುಖರು, ಪಕ್ಷದ ಇತರೆ ಪದಾಧಿಕಾರಿಗಳು ಭಾಗಿಯಾಗಿದ್ದರು.
ಸಂತೋಷ್ ಏನ್ ಅಂದ್ರು..!?
ಇಂದು ನಡೆದ ಸಭೆಯಲ್ಲಿ ಭಾಗಿಯಾಗಿದ್ದ ಬಿಜೆಪಿ ಪ್ರಮುಖರೊಬ್ಬರು ನೀಡಿದ ಮಾಹಿತಿಯ ಪೂರ್ಣಪಾಠ ಇಲ್ಲಿದೆ. ಶಕ್ತಿ ಪ್ರಮುಖರ ಸಭೆಯಲ್ಲಿ ಸಂತೋಷ್ ಮಾತನಾಡಿ, ಬಿಜೆಪಿ ಕಾರ್ಯಕರ್ತರ ಪಕ್ಷ, ಇಲ್ಲಿ ರಥವನ್ನು ಬೇರೆ ಪಕ್ಷಗಳಂತೆ ಒಬ್ಬರು-ಇಬ್ಬರು ಎಳೆಯುವುದಿಲ್ಲ, ಕಾರ್ಯಕರ್ತರೇ ತೊಡಗಿ ಗೆಲುವನ್ನು ತರುತ್ತಾರೆ, ನಮ್ಮದು ಪುರಿ ಜಗನ್ನಾಥನ ರೀತಿ ರಥ ಲಕ್ಷಾಂತರ ಮಂದಿ ಎಳೆಯುತ್ತಾರೆ, ಚಾಮರಾಜನಗರದ 4 ಕ್ಷೇತ್ರಗಳಲ್ಲೂ ಈ ಬಾರಿ ಕಮಲ ಅರಳಿಸಬೇಕು ಎಂದು ಪ್ರಮುಖರಿಗೆ ಕರೆ ಕೊಟ್ಟಿದ್ದಾರೆ.
ಓರ್ವ ಅಭ್ಯರ್ಥಿ ಮೇಲೆ ಎಲ್ಲರದ್ದೂ ಒಂದೊಂದು ಅಭಿಪ್ರಾಯ ಇರಲಿದೆ, 4 ಸಾವಿರ ಆಕಾಂಕ್ಷಿಗಳಿದ್ದಾರೆ 4 ಸಾವಿರ ಅಭಿಪ್ರಾಯ ಇರುತ್ತದೆ, ಪಕ್ಷ ಯಾರನ್ನೂ ಆಯ್ಕೆ ಮಾಡುತ್ತದೆಯೋ ಅವರಿಗೆ ನಮ್ಮ ಬೆಂಬಲ ಇರಬೇಕು, ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಬೇಕು, ಬೂತ್ ಮಟ್ಟ ಎಂದರೆ ಭಾಷಣ ಮಾಡುವ ಹಂತವಲ್ಲ, ಕೆಲಸ ಮಾಡುವ ಹಂತ ಎಂಬುದನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದ್ದಾರೆ.
ಅನಿವಾಸಿ ಮತದಾರರ ಬಗ್ಗೆ ಇರಲಿ ಮಾಹಿತಿ: ಮತದಾರರ ಪಟ್ಟಿಯಲ್ಲಿ ವ್ಯಕ್ತಿಯ ಹೆಸರು ಇರುತ್ತದೆ ಆದರೆ ಆ ವ್ಯಕ್ತಿ ಬೇರೆಲ್ಲೋ ಇರುತ್ತಾರೆ ಒಂದೊಂದು ಊರಿನಲ್ಲೂ ಈ ಅನಿವಾಸಿ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಇರುತ್ತಾರೆ ಇವರಿಗೂ ಕೂಡ ಬಿಜೆಪಿ ಕಾರ್ಯಕ್ರಮಗಳನ್ನು ತಿಳಿಸಿ ಮತದಾನದಿಂದ ಅವರು ಹೊರಗುಳಿಯದಂತೆ ಮಾಡಿ ಬಿಜೆಪಿ ಮತದಾರರನ್ನಾಗಿಸಬೇಕು. ನಮ್ಮ ಬಿಜೆಪಿಗೆ ಇಂತಿಷ್ಟು ಮತಬ್ಯಾಂಕ್ ಎಂದು ಇದ್ದೇ ಇರಲಿದೆ ಅದಕ್ಕೆ ಜನರನ್ನು ಆ್ಯಡ್ ಮಾಡುತ್ತಾ ಹೋಗಬೇಕೆ ಹೊರತು ಡಿಲಿಟ್ ಮಾಡಬಾರದು, ಬೂತ್ ಮಟ್ಟದಲ್ಲಿ ಭಾಷಣ ಮಾಡಬೇಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆ, ಕೆಲಸ ಹೇಳಿ ಎಂದು ಪ್ರಮುಖರಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕಾಂಗ್ರೆಸ್ ಗೆ ಮದ್ದು ಅರಿಯುವ ಚುನಾವಣೆ:
ಮುಂಬರುವ ಚುನಾವಣೆ ಕಾಂಗ್ರೆಸ್ ಗೆ ಮದ್ದು ಅರಿಯುವ ಚುನಾವಣೆ ಎಂದು ವ್ಯಾಖ್ಯಾನಿಸಿರುವ ಬಿ.ಎಲ್. ಸಂತೋಷ್ ದೇವನಹಳ್ಳಿ ತಾಲೂಕಿನಲ್ಲೇ ಟಿಪ್ಪು ಕೂಡ ಹುಟ್ಟಿದ್ದು ಕೆಂಪೇಗೌಡರು ಹುಟ್ಟಿದ್ದು ಆದರೆ ಕೆಂಪೇಗೌಡರನ್ನು ಮತ್ತೇ ನೆನಪಿಸಲು ಬಿಜೆಪಿ ಬರಬೇಕಾಯಿತು, ರಾಣಿ ಅಬ್ಬಕ್ಕ, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಸ್ಮರಿಸಲು ಬಿಜೆಪಿ ಬರಬೇಕಾಯಿತು ಎಂದು ಕೈ ಪಾಳೇಯ ವಿರುದ್ಧ ಕಿಡಿಕಾರಿದರು.
ಹಳೇ ಮೈಸೂರು ಭಾಗ ವಶಕ್ಕೆ ಪ್ಲಾನ್: ಹಳೇ ಮೈಸೂರು ಭಾಗವನ್ನು ಕಮಲದ ವಶ ಮಾಡಿಕೊಳ್ಳಬೇಕೆಂದು ಈಗಾಗಲೇ ಬಿಜೆಪಿ ಉನ್ನತ ಮಟ್ಟದ ನಾಯಕರು ಪ್ಲಾನ್ ಮಾಡುತ್ತಿದ್ದು ಸಂತೋಷ್ ಅವರ ಈ ಸಭೆ ಮಹತ್ವ ಪಡೆದುಕೊಂಡಿದೆ. ಜೊತೆಗೆ, ಶಾಸಕರು, ಟಿಕೆಟ್ ಆಕಾಂಕ್ಷಿಗಳಿಗೆ, ಶಕ್ತಿ ಪ್ರಮುಖರಿಗೆ ಕೆಲವು ಮಹತ್ವಪೂರ್ಣ ಸಲಹೆಗಳನ್ನು ಸಂತೋಷ್ ಕೊಟ್ಟಿದ್ದಾರೆ ಎಂದು ತಿಳಿದುಬಂದಿದೆ.
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/LG00SlXNdBFJ1LFb3E40gL
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw
























