ಟ್ಯೂಷನ್ ಮುಗಿಸಿ ಬರುತ್ತಿದ್ದ ಬಾಲಕನನ್ನು ಅಪಹರಿಸಿ ಕೊಲೆ: ಕಾಲಿಗೆ ಗುಂಡು ಹಾರಿಸಿ ಆರೋಪಿಗಳ ಬಂಧನ

nishchit
01/08/2025

ಬೆಂಗಳೂರು: ಟ್ಯೂಷನ್ ಮುಗಿಸಿಕೊಂಡು ಬರುತ್ತಿದ್ದ ಬಾಲಕನನ್ನು ಅಪಹರಿಸಿ ಕೊಲೆ ಮಾಡಿರುವ ಘಟನೆಗೆ ಸಂಬಂಧಿಸಿದಂತೆ  ಇಬ್ಬರು ಆರೋಪಿಗಳನ್ನು  ಹುಳಿಮಾವು ಠಾಣೆ ಪೊಲೀಸರು ಬಂಧಿಸಿದ್ದಾರೆ.

ಗುರುಮೂರ್ತಿ ಹಾಗೂ ಗೋಪಾಲಕೃಷ್ಣ ಬಂಧಿತ ಆರೋಪಿಗಳಾಗಿದ್ದಾರೆ.  13 ವರ್ಷದ ನಿಶ್ಚಿತ್ ಕೊಲೆಯಾದ ಬಾಲಕನಾಗಿದ್ದಾನೆ. ಕೃತ್ಯದ ಬಳಿಕ ಆರೋಪಿಗಳು  ಕಗ್ಗಲಿಪುರ ಅರಣ್ಯ ಪ್ರದೇಶದಲ್ಲಿ ಅಡಗಿ ಕುಳಿತಿದ್ದರು. ಈ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಗುರುವಾರ ತಡರಾತ್ರಿ ತೆರಳಿದ ಪೊಲೀಸರು ಕಾರ್ಯಾಚರಣೆ ನಡೆಸಿದ್ದು, ಈ ವೇಳೆ ಪೊಲೀಸರ ಮೇಲೆಯೇ ಆರೋಪಿಗಳು ಹಲ್ಲೆಗೆ ಮುಂದಾದಾಗ ಕಾಲಿಗೆ ಗುಂಡು ಹಾರಿಸಿ ಇಬ್ಬರನ್ನೂ ಬಂಧಿಸಲಾಗಿದೆ.

ಗುರುಮೂರ್ತಿ ಪ್ರಕರಣದ ಮಾಸ್ಟರ್ ಮೈಂಡ್ ಎಂದು ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತ ಬಾಲಕನ ಕುಟುಂಬವು ಈ ಹಿಂದೆ ಗುರುಮೂರ್ತಿಯನ್ನು ಸ್ಪೇರ್ ಡ್ರೈವರ್ ಆಗಿ ನೇಮಿಸಿಕೊಂಡಿತ್ತು. ಬುಧವಾರ ರಾತ್ರಿ 8 ಗಂಟೆಯಾದರೂ ತನ್ನ ಮಗ ಮನೆಗೆ ಹಿಂತಿರುಗದ ಕಾರಣ ಕಾಲೇಜು ಪ್ರಾಧ್ಯಾಪಕರಾಗಿರುವ ನಿಶ್ಚಿತ್ ಅವರ ತಂದೆ ಹುಳಿಮಾವು ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ನಿಶ್ಚಿತ್ ಸೈಕಲ್ ಅರಕೆರೆಯ ಪ್ರೋಮಿಲಿ ಪಾರ್ಕ್ ಪ್ರದೇಶದಲ್ಲಿ ಬಿಟ್ಟು ಹೋಗಲಾಗಿತ್ತು.

ಬಾಲಕನನ್ನು ಅಪಹರಿಸಿ ₹5 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು. ಹುಳಿಮಾವು ಠಾಣೆಗೆ ಪೋಷಕರು ಘಟನೆ‌ ಕುರಿತು ಮಾಹಿತಿ‌ ನೀಡಿದ್ದರು. ಒಂದೆಡೆ ಪೊಲೀಸರು ಕಾರ್ಯಾಚರಣೆಗೆ ಮುಂದಾಗಿದ್ದರು. ಮತ್ತೊಂದೆಡೆ ಪೋಷಕರು, ಆರೋಪಿಗಳಿಗೆ ₹5 ಲಕ್ಷ ನೀಡಿ ಮಗನನ್ನು ರಕ್ಷಿಸಿಕೊಳ್ಳಲು ಮುಂದಾಗಿದ್ದರು.‌ ಆದರೆ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ತಿಳಿದ ಆರೋಪಿಗಳು ಬಾಲಕನ್ನು ಕಗ್ಗಲಿಪುರದ ನಿರ್ಜ‌ನ ಪ್ರದೇಶಕ್ಕೆ ಕರೆದೊಯ್ದು ಕತ್ತು ಕೊಯ್ದು ಕೊಲೆ ಮಾಡಿ ಪೆಟ್ರೋಲ್ ಸುರಿದು ಸುಟ್ಟು ಹಾಕಿದ್ದಾರೆ ಎಂದು ಬೆಂಗಳೂರು ಗ್ರಾಮಾಂತರ ಎಸ್ಪಿ ಸಿ.ಕೆ. ಬಾಬಾ ತಿಳಿಸಿದ್ದಾರೆ. ಅಪಹರಣಕಾರರನ್ನು ಚಿಕಿತ್ಸೆಗಾಗಿ ಜಯನಗರ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version