ತಾಯಿ, ಅಜ್ಜಿ, ಮಾವನನ್ನು ಕೊಚ್ಚಿ ಕೊಂದು ಕ್ಯಾಬ್ ಚಾಲಕ ಆತ್ಮಹತ್ಯೆ!
ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶನಿವಾರ ಬೆಳಿಗ್ಗೆ ನಡುಕ ಹುಟ್ಟಿಸುವಂತಹ ಭೀಕರ ತ್ರಿವಳಿ ಕೊಲೆ ಪ್ರಕರಣವೊಂದು ಬೆಳಕಿಗೆ ಬಂದಿದೆ. ತಾಯಿ, ಅಜ್ಜಿ ಹಾಗೂ ಮಾವನನ್ನು ಭೀಕರವಾಗಿ ಕೊಲೆ ಮಾಡಿದ ಯುವಕನೋರ್ವ, ಬಳಿಕ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಮಾಕ್ಷಿಪಾಳ್ಯ ಪೊಲೀಸ್ ಠಾಣಾ ವ್ಯಾಪ್ತಿಯ ಕೊಟ್ಟಿಗೆಪಾಳ್ಯದಲ್ಲಿ ನಡೆದಿದೆ.
ಕ್ಯಾಬ್ ಚಾಲಕನಾಗಿದ್ದ ಪ್ರಶಾಂತ್ ಎಂಬಾತನೇ ಈ ಭೀಕರ ಕೃತ್ಯ ಎಸಗಿದ ಆರೋಪಿ. ಈತನ ಕೈಯಿಂದ ಕೊಲೆಯಾದವರನ್ನು ತಾಯಿ ಮಂಗಳಮ್ಮ, ಅಜ್ಜಿ ನಂಜಮ್ಮ ಮತ್ತು ಮಾವ ಸತೀಶ್ ಎಂದು ಗುರುತಿಸಲಾಗಿದೆ.
ಮೃತ ಕುಟುಂಬಸ್ಥರು ಕಳೆದ ಏಳೆಂಟು ವರ್ಷಗಳಿಂದ ಕೊಟ್ಟಿಗೆಪಾಳ್ಯದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದರು. ಆರೋಪಿ ಪ್ರಶಾಂತ್ ಕಳೆದ ಒಂದು ವರ್ಷದಿಂದ ಯಾವುದೇ ಕೆಲಸಕ್ಕೆ ಹೋಗದೆ ಮನೆಯಲ್ಲೇ ಇರುತ್ತಿದ್ದ ಎನ್ನಲಾಗಿದೆ. ಶನಿವಾರ ಬೆಳಿಗ್ಗೆ ತಂದೆ ಕೆಲಸಕ್ಕೆ ಹೋದ ಸಂದರ್ಭದಲ್ಲಿ, ಪ್ರಶಾಂತ್ ಮನೆಯಲ್ಲಿದ್ದ ತಾಯಿ ಮಂಗಳಮ್ಮ (ಗಾರ್ಮೆಂಟ್ಸ್ ನೌಕರರು), ಅಜ್ಜಿ ನಂಜಮ್ಮ (ಪೌರಕಾರ್ಮಿಕರು) ಹಾಗೂ ಮಾವ ಸತೀಶ್ (ಪ್ಲಂಬರ್) ಅವರನ್ನು ಕಟುಕನಂತೆ ಕೊಚ್ಚಿ ಕೊಲೆ ಮಾಡಿದ್ದಾನೆ.
ಮೂವರನ್ನು ಹತ್ಯೆ ಮಾಡಿದ ಬಳಿಕ ಆರೋಪಿ ಪ್ರಶಾಂತ್ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಇದನ್ನು ಗಮನಿಸಿದ ಮನೆ ಮಾಲೀಕರು ಹಾಗೂ ಸ್ಥಳೀಯರು ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಯನ್ನು ಹಿಡಿದು, ಮನೆಯ ಒಂದು ಕೊಠಡಿಯಲ್ಲಿ ಹಾಕಿ ಬೀಗ ಹಾಕಿದ್ದಾರೆ. ತಕ್ಷಣವೇ ಪೊಲೀಸರಿಗೂ ಮಾಹಿತಿ ನೀಡಿದ್ದಾರೆ.
ಸ್ಥಳೀಯರಿಂದ ಮಾಹಿತಿ ಪಡೆದ ಕಾಮಾಕ್ಷಿಪಾಳ್ಯ ಠಾಣೆಯ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸಿದ್ದಾರೆ. ಆದರೆ ಪೊಲೀಸರು ಬಂದು ಕೊಠಡಿಯ ಬಾಗಿಲು ತೆರೆಯುವಷ್ಟರಲ್ಲೇ ಆರೋಪಿ ಪ್ರಶಾಂತ್ ಸಹ ಕೊಠಡಿಯ ಒಳಗಡೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮೂಲಗಳು ತಿಳಿಸಿವೆ.
ಘಟನಾ ಸ್ಥಳಕ್ಕೆ ಕಾಮಾಕ್ಷಿಪಾಳ್ಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದು, ಪ್ರಶಾಂತ್ ಈ ಭೀಕರ ಕೃತ್ಯವನ್ನು ಯಾವ ಕಾರಣಕ್ಕಾಗಿ ಎಸಗಿದ್ದಾನೆ ಎಂಬ ನಿಖರ ಮಾಹಿತಿ ಇನ್ನು ತಿಳಿದುಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























