11:41 AM Tuesday 21 - October 2025

ಬಿಜೆಪಿ ಪಕ್ಷ ಸೇರಿದ ಕೇರಳದ ಕ್ಯಾಥೊಲಿಕ್ ಪಾದ್ರಿ: ನಿಯಮ‌ ಉಲ್ಲಂಘಿಸಿದ್ದಾರೆಂದು ಪಾದ್ರಿಯನ್ನು ಅಮಾನತು ಮಾಡಿದ ಇಡುಕ್ಕಿ ಧರ್ಮಪ್ರಾಂತ್ಯ

03/10/2023

ಸಿರೋ-ಮಲಬಾರ್ ಚರ್ಚ್ ಇಡುಕ್ಕಿ ಡಯೋಸಿಸ್ ನ ಕ್ಯಾಥೊಲಿಕ್ ಪಾದ್ರಿಯೊಬ್ಬರು ಬಿಜೆಪಿ ಪಕ್ಷ ಸೇರಿದ್ದಾರೆ. ಬಿಜೆಪಿ ಸೇರಿದ ಕೆಲವೇ ಗಂಟೆಗಳ ನಂತರ ಅವರನ್ನು ಹುದ್ದೆಯಿಂದ ಅಮಾನತು ಮಾಡಲಾಗಿದೆ.

ಫಾದರ್ ಕುರಿಯಕೋಸ್ ಮಟ್ಟಂ ಎಂಬುವವರು ಬಿಜೆಪಿ ಪಕ್ಷದ ಇಡುಕ್ಕಿ ಜಿಲ್ಲಾಧ್ಯಕ್ಷ ಕೆ.ಎಸ್.ಅಜಿ ಅವರಿಂದ ಬಿಜೆಪಿಯ ಪ್ರಾಥಮಿಕ ಸದಸ್ಯತ್ವವನ್ನು ಸ್ವೀಕರಿಸಿದರು. ಕೆಲವೇ ಗಂಟೆಗಳಲ್ಲಿ ಇಡುಕ್ಕಿ ಧರ್ಮಪ್ರಾಂತ್ಯವು ಅವರ ವಿರುದ್ಧ ಕ್ರಮ ಕೈಗೊಂಡಿತು.

ಆದಿಮಾಲಿ ಬಳಿಯ ಮಂಕುವಾ ಸೇಂಟ್ ಥಾಮಸ್ ಚರ್ಚ್ ನಲ್ಲಿ ಫಾದರ್ ಅವರನ್ನು ತಾತ್ಕಾಲಿಕವಾಗಿ ಕರ್ತವ್ಯಗಳಿಂದ ಮುಕ್ತಗೊಳಿಸಲಾಗಿದೆ ಎಂದು ಚರ್ಚ್ ತಿಳಿಸಿದೆ.
ಮಂಕುವಾ ಚರ್ಚ್ ನ ಫಾದರ್ ಕುರಿಯಕೋಸ್ ಮಟ್ಟಂ ಅವರನ್ನು ವಿಕಾರ್ ಆಗಿ ಕರ್ತವ್ಯದಿಂದ ತಾತ್ಕಾಲಿಕವಾಗಿ ಮುಕ್ತಗೊಳಿಸಲಾಗಿದೆ ಎಂದು ಇಡುಕ್ಕಿ ಧರ್ಮಪ್ರಾಂತ್ಯವು ಹೇಳಿಕೆಯಲ್ಲಿ ತಿಳಿಸಿದೆ.

ಕ್ಯಾನನ್ ಕಾನೂನಿನ ಪ್ರಕಾರ, ಚರ್ಚ್ ನ ಯಾವುದೇ ಪಾದ್ರಿ ಯಾವುದೇ ರಾಜಕೀಯ ಪಕ್ಷಕ್ಕೆ ಸೇರಲು ಅಥವಾ ಸಕ್ರಿಯವಾಗಿ ಭಾಗವಹಿಸಲು ಅವಕಾಶವಿಲ್ಲ. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮ ತೆಗೆದುಕೊಳ್ಳಲಾಗಿದೆ ಎಂದು ಚರ್ಚ್ ವಕ್ತಾರರು ಪಿಟಿಐಗೆ ತಿಳಿಸಿದ್ದಾರೆ. 74 ವರ್ಷದ ಪಾದ್ರಿ ಕೆಲವೇ ತಿಂಗಳುಗಳಲ್ಲಿ ನಿವೃತ್ತರಾಗಲಿದ್ದಾರೆ ಎಂದು ಚರ್ಚ್ ಮೂಲಗಳು ತಿಳಿಸಿವೆ.

“ನಾನು ಸಮಕಾಲೀನ ನಿಯಮಗಳನ್ನು ಅನುಸರಿಸುತ್ತೇನೆ. ಬಿಜೆಪಿ ಸೇರದಿರಲು ನನಗೆ ಯಾವುದೇ ಕಾರಣ ಕಾಣುತ್ತಿಲ್ಲ. ನನಗೆ ಅನೇಕ ಬಿಜೆಪಿ ಕಾರ್ಯಕರ್ತರೊಂದಿಗೆ ಸ್ನೇಹವಿದೆ. ಇಂದು ನಾನು ಸದಸ್ಯತ್ವ ಪಡೆದಿದ್ದೇನೆ. ನಾನು ಪತ್ರಿಕೆಗಳಿಂದ ಓದಿದ್ದೇನೆ ಮತ್ತು ದೇಶದಲ್ಲಿ ಬಿಜೆಪಿಯ ಬಗ್ಗೆ ತಿಳುವಳಿಕೆ ಹೊಂದಿದ್ದೇನೆ” ಎಂದು ಪಾದ್ರಿ ಹೇಳಿದ್ದಾರೆ. ಕ್ರಿಶ್ಚಿಯನ್ ಪಾದ್ರಿಯ ಬಿಜೆಪಿ ಪ್ರವೇಶವು ಮಣಿಪುರ ವಿಷಯದ ಬಗ್ಗೆ ಪಕ್ಷವನ್ನು ಟೀಕಿಸುವವರಿಗೆ ಉತ್ತರವಾಗಿದೆ ಎಂದು ಬಿಜೆಪಿ ಮುಖಂಡ ಅಜಿ ಹೇಳಿದರು.

ಇತ್ತೀಚಿನ ಸುದ್ದಿ

Exit mobile version