ಚಿಕ್ಕಮಗಳೂರು: ಸ್ವಾತಂತ್ರ್ಯ ದಿನಾಚರಣೆ ಬೆನ್ನಲ್ಲೇ ದಲಿತ ಸಂಘಟನೆಗಳ ಧರಣಿ; ಸರ್ಕಾರದ ವಿರುದ್ಧ ಆಕ್ರೋಶ
ಚಿಕ್ಕಮಗಳೂರು: ನಗರದಲ್ಲಿ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮ ಮುಕ್ತಾಯಗೊಳ್ಳುತ್ತಿದ್ದಂತೆಯೇ ದಲಿತ ಸಂಘಟನೆಗಳು ಬೃಹತ್ ಪ್ರತಿಭಟನೆ ಆರಂಭಿಸಿದ್ದು, ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿವೆ.
ಧ್ವಜಾರೋಹಣ ಮತ್ತು ಪಥಸಂಚಲನ ನಡೆದ ಅದೇ ಸ್ವಾತಂತ್ರ್ಯ ದಿನಾಚರಣೆ ಮೈದಾನದಲ್ಲೇ ಧರಣಿ ಕುಳಿತ ಪ್ರತಿಭಟನಾಕಾರರು, ತಮ್ಮ ಹಲವು ವರ್ಷಗಳ ಹಳೆಯ ಬೇಡಿಕೆಯನ್ನು ಈಡೇರಿಸುವಂತೆ ಪಟ್ಟು ಹಿಡಿದರು.
ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಬೌದ್ಧ ವಿಹಾರ ನಿರ್ಮಾಣಕ್ಕೆ ಗವನಹಳ್ಳಿ ಸರ್ವೇ ನಂಬರ್ 93ರಲ್ಲೇ ಜಾಗ ಮಂಜೂರು ಮಾಡಬೇಕು. ಬೇರೆ ಯಾವುದೇ ಪರ್ಯಾಯ ಜಾಗವನ್ನು ಸ್ವೀಕರಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಲವು ವರ್ಷಗಳಿಂದ “ಜಾಗ ನೀಡುತ್ತೇವೆ” ಎಂದು ಭರವಸೆ ನೀಡುತ್ತಾ ಕಾಂಗ್ರೆಸ್ ಸರ್ಕಾರ ನಾಟಕವಾಡುತ್ತಿದೆ ಎಂದು ಪ್ರತಿಭಟನಾಕಾರರು ಕಿಡಿಕಾರಿದ್ದಾರೆ.
ಸ್ವಾತಂತ್ರ್ಯೋತ್ಸವ ಭಾಷಣದಲ್ಲಿ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು “ಜಾಗದ ಕುರಿತು ಶೀಘ್ರ ಕ್ರಮ ಕೈಗೊಳ್ಳಲಾಗುವುದು” ಎಂದು ತಿಳಿಸಿದ್ದರು. ಆದರೆ, ಭಾಷಣದ ಬಳಿಕ ಸಚಿವರನ್ನು ನೇರವಾಗಿ ಭೇಟಿಯಾಗಿ ಮಾತನಾಡಲು ಅವಕಾಶ ಕೋರಿದರೂ ಅವಕಾಶ ಸಿಗದ ಕಾರಣ ದಲಿತ ಸಂಘಟನೆಗಳ ನಾಯಕರು ಕೆರಳಿದರು.
ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಜಾಗದ ಸಮಸ್ಯೆಗೆ ತಕ್ಷಣವೇ ಇತ್ಯರ್ಥ ಕಂಡುಕೊಳ್ಳಬೇಕು ಮತ್ತು ನಿಗದಿತ ಸ್ಥಳದಲ್ಲೇ ಭೂಮಿ ಮಂಜೂರು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಸಂಘಟನೆಯ ಮುಖಂಡರು ಶೀಘ್ರದಲ್ಲೇ ಸೂಕ್ತ ಆದೇಶ ಹೊರಡಿಸದಿದ್ದರೆ ಮುಂಬರುವ ದಿನಗಳಲ್ಲಿ ಪ್ರತಿಭಟನೆಯನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD




























