ಅಪ್ಪ ಸಾವನ್ನಪ್ಪಿದ ವಿಷಯ ತಿಳಿಯದೇ ಮದುವೆಯಾದ ಮಗಳು: ಸಿನಿಮಾವನ್ನೂ ಮೀರಿಸುವಂತಿದೆ ಈ ಹೃದಯ ವಿದ್ರಾವಕ ಘಟನೆ
ಚಿಕ್ಕಮಗಳೂರು: ಮಗಳ ಮದುವೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಅಪ್ಪ ಅಪಘಾತದಲ್ಲಿ ಮೃತಪಟ್ಟಿದ್ದು, ಅತ್ತ, ಮಗಳ ಮದುವೆ ನಿಂತು ಹೋಗಬಾರದು ಎನ್ನುವ ಉದ್ದೇಶದಿಂದ ತಂದೆ ಸಾವನ್ನಪ್ಪಿದ ವಿಷಯ ಮಗಳಿಗೆ ತಿಳಿಸದೆಯೇ ಸಂಬಂಧಿಕರು ಮಗಳಿಗೆ ಮದುವೆ ಮಾಡಿಸಿದ ಹೃದಯವಿದ್ರಾವಕ ಘಟನೆ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆಯಲ್ಲಿ ನಡೆದಿದೆ.
ಚೀಲದ ಪಾಪಣ್ಣನವರ ಮಗ ಚಂದ್ರು (45) ಮೃತಪಟ್ಟವರಾಗಿದ್ದಾರೆ. ನಿನ್ನೆ ಬೆಳಗ್ಗೆ ತರೀಕೆರೆ ತಾಲೂಕಿನ ಹುಲಿತಿಮ್ಮಾಪುರಕ್ಕೆ ಲಗ್ನಪತ್ರಿಕೆ ಕೊಡಲು ಹೋಗಿದ್ದ ಚಂದ್ರು ತರೀಕೆರೆಗೆ ವಾಪಸ್ ಬರುವಾಗ ಅಪಘಾತದಲ್ಲಿ ಸಾವನ್ನಪ್ಪಿದ್ದರು.
ಇಂದು ಚಂದ್ರು ಮಗಳು ದೀಕ್ಷೀತಾಳ ಮದುವೆ ನಡೆಯುತ್ತಿದೆ. ಅತ್ತ ಮಗಳಿಗೆ ಅಪ್ಪ ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವುದಷ್ಟೇ ಗೊತ್ತಿತ್ತು. ಚಂದ್ರು ಸಾವನ್ನಪ್ಪಿದ ವಿಚಾರ ಅವರ ಪತ್ನಿಗೂ ತಿಳಿದಿರಲಿಲ್ಲ. ಅಪ್ಪ ಆಸ್ಪತ್ರೆಯಲ್ಲಿ ಇದ್ದಾರೆ ಎಂದು ಆರತಕ್ಷತೆ-ಮದುವೆ ಮುಗಿಸಿದ ಸಂಬಂಧಿಕರು ವಿವಾಹ ಕಾರ್ಯಗಳನ್ನು ಮುಗಿಸಿದ್ದಾರೆ.
ಮದುವೆಗೆ ಓಡಾಡಿ ಸುಸ್ತಾಗಿ ಚಂದ್ರು ಸುಸ್ತಾಗಿ ಆಸ್ಪತ್ರೆಗೆ ಸೇರಿದ್ದಾರೆ ಎಂದು ಪತ್ನಿ—ಮಗಳು ಭಾವಿಸಿದ್ದರು. ಆದರೆ ಇಂದು ಮದುವೆ ಕಾರ್ಯಕ್ರಮ ಮುಗಿದ ಬಳಿಕ ಸಂಬಂಧಿಕರು ಪತ್ನಿಗೆ-ಮಗಳಿಗೆ ವಿಷಯ ಮುಟ್ಟಿಸಿದ್ದಾರೆ. ಇದರಿಂದಾಗಿ ಮದುವೆ ಮನೆಯಲ್ಲಿ ಇದೀಗ ಸೂತಕದ ಛಾತೆ ಮೂಡಿದೆ, ಪತ್ನಿ ಹಾಗೂ ಮಗಳ ರೋದನೆ ಕರುಳು ಚುರ್ ಎನಿಸುವಂತಿತ್ತು.
ಆಸ್ಪತ್ರೆಯ ಶವಗಾರದಲ್ಲಿ ಅಪ್ಪನ ಮೃತದೇಹ ಇದ್ದರೆ ಇತ್ತ ಮದುವೆ ಮಂಟಪದಲ್ಲಿ ಮಗಳ ವಿವಾಹ ನೆರವೇರಿತ್ತು. ಸಾಕಷ್ಟು ಖರ್ಚು ಮಾಡಿ ಎಲ್ಲ ರೀತಿಯ ಏರ್ಪಾಡು ಮಾಡಲಾಗಿತ್ತು. ಕೊನೆಯ ಕ್ಷಣದಲ್ಲಿ ತಂದೆಯನ್ನು ಕಳೆದುಕೊಂಡು ಮದುವೆಯೂ ನಿಂತು ಹೋಗಬಾರದು ಎನ್ನುವ ಉದ್ದೇಶದಿಂದ ಸಂಬಂಧಿಕರು ತಾವೇ ಮುಂದೆ ನಿಂತು ಮದುವೆ ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ಇದೀಗ ಮದುವೆಯ ಸಂಭ್ರಮದ ಮನೆಯಲ್ಲಿ ಚಂದ್ರುವನ್ನು ಕಳೆದುಕೊಂಡು ಕುಟುಂಬಸ್ಥರು ತೀವ್ರವಾಗಿ ದುಃಖಿತರಾಗಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/Ci8F6ckDmAbCBQyqgLqOPx

























