ಚಿಕ್ಕಮಗಳೂರು: ಹೆಡ್ ಲೈಟ್ ಇಲ್ಲದ KSRTC ಬಸ್; ದುರ್ಗಮ ಹಾದಿಯಲ್ಲಿ 60 ಕಿ.ಮೀ. ಸುರಕ್ಷಿತ ಸಂಚಾರ ನಡೆಸಿ ಸೈ ಎನಿಸಿಕೊಂಡ ಚಾಲಕ!
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸರ್ಕಾರಿ ಬಸ್ ಚಾಲಕನೊಬ್ಬನ ಸಾಹಸಮಯ ಚಾಲನೆ ಈಗ ಎಲ್ಲೆಡೆ ಮೆಚ್ಚುಗೆಗೆ ಹಾಗೂ ಚರ್ಚೆಗೆ ಗ್ರಾಸವಾಗಿದೆ. ದಟ್ಟ ಅರಣ್ಯ ಮತ್ತು ಕಾಫಿ ತೋಟಗಳ ಮಧ್ಯೆ ಹೆಡ್‌ಲೈಟ್ ಇಲ್ಲದ KSRTC ಬಸ್ಸನ್ನು ಸುಮಾರು 60 ಕಿ.ಮೀ. ದೂರದವರೆಗೆ ರಾತ್ರಿ ವೇಳೆ ಸುರಕ್ಷಿತವಾಗಿ ಚಲಾಯಿಸುವ ಮೂಲಕ ಚಾಲಕ ಎಲ್ಲರ ಹುಬ್ಬೇರಿಸುವಂತೆ ಮಾಡಿದ್ದಾರೆ.
ಕೋಲಾರ ಡಿಪೋಗೆ ಸೇರಿದ KSRTC ಬಸ್ ಶೃಂಗೇರಿಯಿಂದ ರಾತ್ರಿ 10:30ರ ಸುಮಾರಿಗೆ ಚಿಕ್ಕಮಗಳೂರು ಜಿಲ್ಲಾ ಕೇಂದ್ರದತ್ತ ಹೊರಟಿತ್ತು. ಆದರೆ ಬಸ್ಸಿನ ಹೆಡ್ ಲೈಟ್ ಅರ್ಧದಲ್ಲೇ ಕೈಕೊಟ್ಟಿತ್ತೋ ಅಥವಾ ಸರಿಯಾದ ನಿರ್ವಹಣೆ ಇಲ್ಲದೆ ದುರಸ್ತಿ ಮಾಡಿರಲಿಲ್ಲವೋ ಎಂಬ ಅನುಮಾನಗಳು ಸ್ಥಳೀಯರಿಂದ ವ್ಯಕ್ತವಾಗಿವೆ.
ಶೃಂಗೇರಿಯಿಂದ ಚಿಕ್ಕಮಗಳೂರು–ಬಾಳೆಹೊನ್ನೂರು ಮಾರ್ಗವು ದಟ್ಟ ಅರಣ್ಯ ಹಾಗೂ ಕಾಫಿತೋಟಗಳ ಮಧ್ಯೆ ಸಾಗುತ್ತದೆ. ಈ ರಸ್ತೆಯಲ್ಲಿ ಹಗಲಲ್ಲೇ ಸಂಚರಿಸುವುದೇ ಸಾಹಸದ ಕೆಲಸ. ಇಂತಹ ಕಡೆ ಭಾರೀ ಪ್ರಮಾಣದಲ್ಲಿ ಗುಂಡಿಗಳು ಬಿದ್ದಿದ್ದು, ಅಪಾಯಕಾರಿ ತಿರುವುಗಳಿರುವ ರಸ್ತೆಯಲ್ಲಿ ರಾತ್ರಿ ವೇಳೆ ಲೈಟ್ ಇಲ್ಲದೆ ಬಸ್ ಚಲಾಯಿಸುವುದು ನಿಜಕ್ಕೂ ದೊಡ್ಡ ಸವಾಲಾಗಿತ್ತು.
ಲೈಟ್ ಇಲ್ಲದೆ ಚಾಲಕ ಬಸ್ಸನ್ನು ಪರದಾಡುತ್ತಾ, ಎಚ್ಚರಿಕೆಯಿಂದ ಚಲಾಯಿಸುತ್ತಿದ್ದ ದೃಶ್ಯವನ್ನು ಹಿಂದಿನಿಂದ ಬಂದ ಬೈಕ್ ಸವಾರರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದ್ದು, ಈ ವಿಡಿಯೋ ಈಗ ವೈರಲ್ ಆಗಿದೆ.
ಅಂತಹ ದುರ್ಗಮ ಹಾದಿಯಲ್ಲಿ ಪ್ರಯಾಣಿಕರ ಸುರಕ್ಷತೆಯನ್ನು ಕಾಪಾಡಿದ ಸರ್ಕಾರಿ ಬಸ್ ಚಾಲಕನ ಸಮಯಪ್ರಜ್ಞೆ ಮತ್ತು ಚಾಲನಾ ಕೌಶಲಕ್ಕೆ ಮಲೆನಾಡಿಗರು ಹ್ಯಾಟ್ಸಾಫ್ ಹೇಳಿದ್ದಾರೆ. ಅದೇ ಸಮಯದಲ್ಲಿ, ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಯ ಬಳಿಕ ಬಸ್‌ಗಳ ಸರಿಯಾದ ನಿರ್ವಹಣೆ ಹಾಗೂ ತಾಂತ್ರಿಕ ಪರಿಶೀಲನೆ ನಡೆಯುತ್ತಿಲ್ಲವೇ ಎಂದು ಸ್ಥಳೀಯರು ಆರೋಪಿಸಿದ್ದಾರೆ.




























