ವಿದ್ಯಾರ್ಥಿಗಳ ನಡುವಿನ ಗಲಾಟೆ ಕೊಲೆಯಲ್ಲಿ ಅಂತ್ಯ; ಬಿಕಾಂ ವಿದ್ಯಾರ್ಥಿಗೆ ಚಾಕುವಿನಿಂದ ಇರಿದು ಹತ್ಯೆ!
ಬೆಂಗಳೂರು: ರಾಜಧಾನಿಯಲ್ಲಿ ವಿದ್ಯಾರ್ಥಿಗಳ ನಡುವಿನ ಕ್ಷುಲ್ಲಕ ಗಲಾಟೆಯು ವಿಕೋಪಕ್ಕೆ ತಿರುಗಿ, ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿಯೊಬ್ಬನನ್ನು ಸಹಪಾಠಿಗಳು ಚಾಕುವಿನಿಂದ ಇರಿದು ಭೀಕರವಾಗಿ ಕೊಲೆ ಮಾಡಿರುವ ಆಘಾತಕಾರಿ ಘಟನೆ ನಡೆದಿದೆ.
ಕೊಲೆಯಾದ ದುರ್ದೈವಿ ವಿದ್ಯಾರ್ಥಿಯನ್ನು ಖಾಸಗಿ ಕಾಲೇಜಿನ ಪ್ರಥಮ ವರ್ಷದ ಬಿಕಾಂ ವಿದ್ಯಾರ್ಥಿ ಯೋಗೀಶ್ (19) ಎಂದು ಗುರುತಿಸಲಾಗಿದೆ. ಯೋಗೀಶ್ ಕಾಲೇಜಿನಲ್ಲಿ ಉತ್ತಮ ವಿದ್ಯಾರ್ಥಿಯಾಗಿದ್ದರ ಜತೆಗೆ ಅತ್ಯುತ್ತಮ ಡಾನ್ಸರ್ ಕೂಡ ಆಗಿದ್ದ ಎಂದು ತಿಳಿದುಬಂದಿದೆ.
ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆ ವ್ಯಾಪ್ತಿಯ ದೀಪಾ ಕಾಂಪ್ಲೆಕ್ಸ್ ಬಳಿ ಈ ಘಟನೆ ಜರುಗಿದೆ. ಎಂದಿನಂತೆ ಕಾಲೇಜಿಗೆ ಬಂದಿದ್ದ ಯೋಗೀಶ್ ಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಅದೇ ಕಾಲೇಜಿನ ಮತ್ತೊಬ್ಬ ವಿದ್ಯಾರ್ಥಿ ಫೋನ್ ಮಾಡಿ, ಕಾಲೇಜಿನ ಹೊರಗೆ ಬಂದು ಮಾತನಾಡುವಂತೆ ಕರೆದಿದ್ದಾನೆ.
ಕೂಡಲೇ ಯೋಗೀಶ್ ಕಾಲೇಜಿನ ಹಿಂಭಾಗದಲ್ಲಿರುವ ಜಿಮ್ ವೊಂದರ ಬಳಿಗೆ ತೆರಳಿದ್ದಾನೆ. ಅಲ್ಲಿ ಯೋಗೀಶ್ ಜತೆ ಮಾತನಾಡಲು ಸುಮಾರು 7–8 ಮಂದಿ ಜಮಾಯಿಸಿದ್ದರು. ಈ ವೇಳೆ ಯೋಗೀಶ್ ಹಾಗೂ ಮತ್ತೊಂದು ಗುಂಪಿನ ನಡುವೆ ಯಾವುದೋ ವಿಚಾರಕ್ಕೆ ಏಕಾಏಕಿ ವಾಗ್ವಾದ ನಡೆದು ಗಲಾಟೆ ಆರಂಭವಾಗಿದೆ.
ಮಾತುಕತೆ ವಿಕೋಪಕ್ಕೆ ತಿರುಗಿ ಗಲಾಟೆ ನಡೆಯುತ್ತಿದ್ದಂತೆ, ಗುಂಪಿನಲ್ಲಿದ್ದ ಓರ್ವ ವಿದ್ಯಾರ್ಥಿ ಏಕಾಏಕಿ ಚಾಕು ತೆಗೆದು ಯೋಗೀಶ್ ನ ಎದೆಗೆ ತೀವ್ರವಾಗಿ ಇರಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದಿದ್ದ ಯೋಗೀಶ್‌ನನ್ನು ಆತನ ಸ್ನೇಹಿತರು ತಕ್ಷಣವೇ ಬೈಕ್ ನಲ್ಲಿ ಹತ್ತಿರದ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಅತಿಯಾದ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಯೋಗೀಶ್ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾನೆ.
ಸುದ್ದಿ ತಿಳಿದ ಕೂಡಲೇ ಅನ್ನಪೂರ್ಣೇಶ್ವರಿ ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗಾಗಿ ತೀವ್ರ ತನಿಖೆ ಮುಂದುವರಿಸಿದ್ದಾರೆ.




























