2:15 AM Saturday 10 - January 2026

ಡಿ.ಕೆ.ಶಿವಕುಮಾರ್ ತಿನಿಸಿದ ಸ್ವೀಟ್ ಎಸೆದ ಸಿಎಂ ಸಿದ್ದರಾಮಯ್ಯ!: ವಿಡಿಯೋ ವೈರಲ್

siddaramaiaha
10/01/2026

ವಿಜಯಪುರ: ರಾಜ್ಯ ರಾಜಕಾರಣದ ‘ಟಗರು’ ಮತ್ತು ‘ಬಂಡೆ’ ಎಂದೇ ಖ್ಯಾತರಾಗಿರುವ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ನಡುವಿನ ಸಣ್ಣ ಘಟನೆಯೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ವಿಜಯಪುರದಲ್ಲಿ ನಡೆದ ಸನ್ಮಾನ ಸಮಾರಂಭವೊಂದರಲ್ಲಿ ಡಿ.ಕೆ. ಶಿವಕುಮಾರ್ ಅವರು ಪ್ರೀತಿಯಿಂದ ತಿನಿಸಿದ ಲಡ್ಡುವನ್ನು ಮುಖ್ಯಮಂತ್ರಿಗಳು ಬಾಯಿಂದ ತೆಗೆದು ಎಸೆದಿದ್ದಾರೆ.

ಘಟನೆಯ ಹಿನ್ನೆಲೆ: ಸಿದ್ದರಾಮಯ್ಯ ಅವರು ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿ ದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ವಿಜಯಪುರದಲ್ಲಿ ಸನ್ಮಾನ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಸಚಿವ ಎಂ.ಬಿ. ಪಾಟೀಲ್ ಅವರ ಮನೆಯಲ್ಲಿ ತಯಾರಿಸಿದ ಲಡ್ಡುಗಳನ್ನು ವೇದಿಕೆಯಲ್ಲಿದ್ದ ಗಣ್ಯರಿಗೆ ನೀಡಲಾಗಿತ್ತು.

ವೇದಿಕೆಯ ಮೇಲೆ ಸಚಿವ ಎಂ.ಬಿ. ಪಾಟೀಲ್ ಅವರು ಮೊದಲು ಮುಖ್ಯಮಂತ್ರಿಗಳಿಗೆ ಲಡ್ಡು ನೀಡಿದರು. ಬಳಿಕ ಅದೇ ಲಾಡುವನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಕೈಗೆ ನೀಡಿ, ಮುಖ್ಯಮಂತ್ರಿಗಳಿಗೆ ತಿನಿಸುವಂತೆ ಕೋರಿದರು. ಎಂ.ಬಿ. ಪಾಟೀಲ್ ಅವರ ಒತ್ತಾಯಕ್ಕೆ ಮಣಿದ ಡಿ.ಕೆ. ಶಿವಕುಮಾರ್ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಸಿಹಿ ತಿನಿಸಿದರು. ಆದರೆ, ಸಿದ್ದರಾಮಯ್ಯ ಅವರು ಆ ಲಡ್ಡುವನ್ನು ತಿಂದ ಕೆಲವೇ ಕ್ಷಣಗಳಲ್ಲಿ ಅದನ್ನು ಬಾಯಿಂದ ತೆಗೆದು ಕೆಳಕ್ಕೆ ಎಸೆದಿದ್ದಾರೆ.

ವೈರಲ್ ಆದ ವಿಡಿಯೋ: ಸಿಎಂ ಸಿದ್ದರಾಮಯ್ಯ ಅವರು ಸಿಹಿಯನ್ನು ಎಸೆದ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಮುಖ್ಯಮಂತ್ರಿಗಳು ಯಾಕೆ ಹೀಗೆ ಮಾಡಿದರು? ಅವರಿಗೆ ಆರೋಗ್ಯದ ಸಮಸ್ಯೆಯೋ ಅಥವಾ ಬೇರೆನಾದರೂ ಕಾರಣವಿದೆಯೇ ಎಂಬ ಚರ್ಚೆಗಳು ಸಾರ್ವಜನಿಕ ವಲಯದಲ್ಲಿ ನಡೆಯುತ್ತಿವೆ.

 

ಸಾಕಷ್ಟು ಗಣ್ಯರು ಕೇವಲ ಫೋಟೋಗಾಗಿ ಮಾತ್ರವೇ ಸ್ವೀಟ್ ತಿಂದಂತೆ ನಟಿಸುತ್ತಾರೆ, ಫೋಟೋ ತೆಗೆದ ನಂತರ  ಸ್ವೀಟ್ ನ್ನು ಎಸೆಯುತ್ತಾರೆ, ಆರೋಗ್ಯದ ಹಿತ ದೃಷ್ಟಿಯಿಂದ ಸಿಎಂ ಸ್ವೀಟ್ ಎಸೆದರೂ, ಸದ್ಯ ಕುರ್ಚಿಗಾಗಿ ಸಿಎಂ, ಡಿಸಿಎಂ ನಡುವೆ ನಡೆಯುತ್ತಿರುವ ವಿವಾದಕ್ಕೂ ಈ ಘಟನೆಗೂ ಸಂಬಂಧ ಕಲ್ಪಿಸಲಾಗುತ್ತಿದೆ.

ಈ ಘಟನೆಯು ರಾಜಕೀಯ ವಲಯದಲ್ಲೂ ಕುತೂಹಲ ಮೂಡಿಸಿದ್ದು, ವಿರೋಧ ಪಕ್ಷಗಳು ಇದನ್ನು ಹೇಗೆ ವಿಶ್ಲೇಷಿಸುತ್ತವೆ ಎಂಬುದನ್ನು ಕಾದು ನೋಡಬೇಕಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version