ಗೃಹಲಕ್ಷ್ಮಿ: ರಾಜ್ಯಾದ್ಯಂತ ಒಟ್ಟು 3.89 ಲಕ್ಷ ಅನರ್ಹ ಫಲಾನುಭವಿಗಳಿಗೆ ಕೊಕ್!

grihalakshmi yojane.jpg
15/06/2026

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ 5 ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ‘ಗೃಹಲಕ್ಷ್ಮಿ’ ಯೋಜನೆಗೆ ಸರ್ಕಾರ ದೊಡ್ಡ ಮೇಜರ್ ಸರ್ಜರಿ ಮಾಡಿದೆ. ಯೋಜನೆಯ ದುರುಪಯೋಗವನ್ನು ತಡೆಯುವ ನಿಟ್ಟಿನಲ್ಲಿ ಪರಿಷ್ಕರಣೆ ನಡೆಸಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ರಾಜ್ಯಾದ್ಯಂತ ಒಟ್ಟು 3.89 ಲಕ್ಷ ಅನರ್ಹ ಫಲಾನುಭವಿಗಳನ್ನು ಯೋಜನೆಯಿಂದ ಕೈಬಿಟ್ಟು ಕೋಟ್ಯಂತರ ಮಹಿಳೆಯರಿಗೆ ಭರ್ಜರಿ ಶಾಕ್ ನೀಡಿದೆ.

ವಿವಿಧ ಇಲಾಖೆಗಳ ದತ್ತಾಂಶಗಳನ್ನು (ಡೇಟಾ ಬೇಸ್) ಪರಸ್ಪರ ಹೊಂದಾಣಿಕೆ ಮಾಡಿ ಪರಿಶೀಲಿಸಿದ ನಂತರ ಈ ಅನರ್ಹರನ್ನು ಗುರುತಿಸಲಾಗಿದ್ದು, ಅವರ ಬ್ಯಾಂಕ್ ಖಾತೆಗಳಿಗೆ ಹಣ ವರ್ಗಾವಣೆ ಮಾಡುವುದನ್ನು ತಕ್ಷಣದಿಂದಲೇ ಸ್ಥಗಿತಗೊಳಿಸಲಾಗಿದೆ.

ಯಾರೆಲ್ಲಾ ಅನರ್ಹರು?

ಆದಾಯ ತೆರಿಗೆ ಮತ್ತು ಜಿಎಸ್ ಟಿ ಪಾವತಿದಾರರು: ನಿಯಮಗಳ ಉಲ್ಲಂಘನೆ ಮಾಡಿ ಸೌಲಭ್ಯ ಪಡೆಯುತ್ತಿದ್ದ 1.94 ಲಕ್ಷ (1,94,560) ಐಟಿ/ಜಿಎಸ್ ಟಿ ಪಾವತಿದಾರರನ್ನು ಗುರುತಿಸಿ ಸೌಲಭ್ಯ ರದ್ದುಗೊಳಿಸಲಾಗಿದೆ.

ಮರಣ ಹೊಂದಿದವರು: ಈಗಾಗಲೇ ಮೃತಪಟ್ಟಿರುವ 1.95 ಲಕ್ಷ (1,95,224) ಮಹಿಳೆಯರ ಖಾತೆಗಳಿಗೂ ಹಣ ಜಮೆಯಾಗುತ್ತಿರುವುದು ಪತ್ತೆಯಾಗಿದ್ದು, ಅಂತಹ ಖಾತೆಗಳನ್ನು ಬಂದ್ ಮಾಡಲಾಗಿದೆ.

ಸರ್ಕಾರಕ್ಕೆ ಪ್ರತಿ ತಿಂಗಳು ₹77 ಕೋಟಿ ಉಳಿತಾಯ:

ಮಾರ್ಚ್ ತಿಂಗಳಿನಿಂದಲೇ ಈ ಪರಿಷ್ಕರಣೆ ಪ್ರಕ್ರಿಯೆ ಆರಂಭವಾಗಿದ್ದು, ಸದ್ಯ 3.89 ಲಕ್ಷ ನಕಲಿ ಹಾಗೂ ಅನರ್ಹ ಫಲಾನುಭವಿಗಳನ್ನು ಕೈಬಿಟ್ಟಿರುವುದರಿಂದ ಸರ್ಕಾರದ ಬೊಕ್ಕಸಕ್ಕೆ ಪ್ರತಿ ತಿಂಗಳು ಸುಮಾರು 77 ಕೋಟಿ ರೂಪಾಯಿ ಉಳಿತಾಯವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಟ್ಟು 1.30 ಕೋಟಿ ಗೃಹಲಕ್ಷ್ಮಿ ಫಲಾನುಭವಿಗಳ ಪೈಕಿ ಈ ಕ್ರಮ ಕೈಗೊಳ್ಳಲಾಗಿದೆ.

ರಾಜ್ಯದ 31 ಜಿಲ್ಲೆಗಳ ಪೈಕಿ ಅನರ್ಹ ಫಲಾನುಭವಿಗಳನ್ನು ಕೈಬಿಟ್ಟ ಪಟ್ಟಿಯಲ್ಲಿ ಬೆಂಗಳೂರು ನಗರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಟಾಪ್ 5 ಜಿಲ್ಲೆಗಳ ವಿವರ ಇಲ್ಲಿದೆ:
ಬೆಂಗಳೂರು ನಗರ: 47,871 (ಐಟಿ- 33,833, ಮೃತಪಟ್ಟವರು- 14,038)
ಬೆಳಗಾವಿ: 32,282 (ಐಟಿ- 16,432, ಮೃತಪಟ್ಟವರು- 15,850)
ಮೈಸೂರು: 20,680 (ಐಟಿ- 9,139, ಮೃತಪಟ್ಟವರು- 11,541)
ತುಮಕೂರು: 20,037 (ಐಟಿ- 7,898, ಮೃತಪಟ್ಟವರು- 12,139)
ದಕ್ಷಿಣ ಕನ್ನಡ: 16,654 (ಐಟಿ- 10,495, ಮೃತಪಟ್ಟವರು- 6,159)

ಶೀಘ್ರದಲ್ಲೇ ಬಯೋಮೆಟ್ರಿಕ್ ವ್ಯವಸ್ಥೆ ಜಾರಿ:

ಮುಂದಿನ ದಿನಗಳಲ್ಲಿ ಇಂತಹ ತಾಂತ್ರಿಕ ಲೋಪಗಳು ಮತ್ತು ನಕಲಿ ಫಲಾನುಭವಿಗಳ ಸೃಷ್ಟಿಯನ್ನು ಸಂಪೂರ್ಣವಾಗಿ ತಡೆಯಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಶೀಘ್ರದಲ್ಲೇ ‘ಬಯೋಮೆಟ್ರಿಕ್ ದೃಢೀಕರಣ’ ವ್ಯವಸ್ಥೆಯನ್ನು ಜಾರಿಗೆ ತರಲು ಸಿದ್ಧತೆ ನಡೆಸಿದೆ. ಈ ಮೂಲಕ ಕೇವಲ ಅರ್ಹರಿಗೆ ಮಾತ್ರ ಯೋಜನೆಯ ಲಾಭ ಸಿಗುವಂತೆ ನೋಡಿಕೊಳ್ಳಲಾಗುವುದು ಎಂದು ಸರ್ಕಾರ ತಿಳಿಸಿದೆ. ಈಗಾಗಲೇ ಯೋಜನೆ ಪರಿಷ್ಕರಣೆಯಾಗುತ್ತಿದ್ದು, ಫಲಾನುಭವಿಗಳು ಮರು ಅರ್ಜಿ ಸಲ್ಲಿಸಬೇಕಾಗಬಹುದು ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕೂಡ ಈ ಹಿಂದೆ ಸುಳಿವು ನೀಡಿದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

 

 

ಇತ್ತೀಚಿನ ಸುದ್ದಿ

Exit mobile version