ಯುದ್ಧದ ಬಿಸಿ: ಹೊಟೇಲ್, ಪಿಜಿಗಳಿಗೆ ಸಂಕಷ್ಟ: ಮೆನು ಚೇಂಜ್, ಹೀಗೆ ಮುಂದುವರಿದ್ರೆ ಮುಂದೇನು?
ಬೆಂಗಳೂರು: ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ದೇಶಾದ್ಯಂತ ವಾಣಿಜ್ಯ ಗ್ಯಾಸ್ ಸಿಲಿಂಡರ್ ಗಾಗಿ ಹಾಹಾಕಾರ ಸೃಷ್ಟಿಯಾಗಿದೆ. ಬೆಲೆ ಕೂಡ ಏರಿಕೆಯಾಗಿದ್ದು, ಸಿಲಿಕಾನ್ ಸಿಟಿಯ ಹೋಟೆಲ್ ಮತ್ತು ಪಿಜಿ (PG) ಮಾಲೀಕರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಗ್ಯಾಸ್ ಕೊರತೆ ಹಾಗೂ ಬೆಲೆ ಏರಿಕೆಯಿಂದಾಗಿ ಇದೀಗ ಬೆಂಗಳೂರಿನ ಪಿಜಿಗಳಲ್ಲಿ ಊಟದ ಮೆನುವನ್ನು ಬದಲಾಯಿಸಲು ನಿರ್ಧರಿಸಲಾಗಿದೆ.
ವಾಣಿಜ್ಯ ಸಿಲಿಂಡರ್ ಬೆಲೆಯಲ್ಲಿ ಸುಮಾರು 115 ರೂ. ಏರಿಕೆಯಾಗಿದ್ದು, ಹೋಟೆಲ್ ಉದ್ಯಮದ ಮೇಲೆ ದೊಡ್ಡ ಹೊಡೆತ ಬಿದ್ದಿದೆ. ಇದಲ್ಲದೇ ಬೆಂಗಳೂರಿನಲ್ಲಿ ಸುಮಾರು 15 ಸಾವಿರಕ್ಕೂ ಹೆಚ್ಚು ಪಿಜಿಗಳಿದ್ದು, 10 ಲಕ್ಷಕ್ಕೂ ಅಧಿಕ ಜನರು ವಾಸಿಸುತ್ತಿದ್ದಾರೆ. ಗ್ಯಾಸ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿರುವುದು ಪಿಜಿ ಮಾಲೀಕರಲ್ಲಿ ಆತಂಕ ಮೂಡಿಸಿದೆ.
ಬದಲಾದ ಮೆನು: ಗ್ಯಾಸ್ ಉಳಿತಾಯ ಮಾಡುವ ಉದ್ದೇಶದಿಂದ ಪಿಜಿಗಳಲ್ಲಿ ಇಂದಿನಿಂದಲೇ ಹೊಸ ಮೆನು ಜಾರಿಗೆ ಬರಲಿದೆ. ಹೆಚ್ಚು ಗ್ಯಾಸ್ ಬಳಸುವ ಚಪಾತಿ ಮತ್ತು ರೊಟ್ಟಿಗಳನ್ನು ಕೈಬಿಡಲು ನಿರ್ಧರಿಸಲಾಗಿದೆ. ಬದಲಿಗೆ ಅನ್ನ, ಸಾಂಬಾರ್ ಹಾಗೂ ಪಲಾವ್ ನಂತಹ ಕಡಿಮೆ ಗ್ಯಾಸ್ ಬಳಸುವ ಪದಾರ್ಥಗಳಿಗೆ ಆದ್ಯತೆ ನೀಡಲಾಗುತ್ತಿದೆ.
ಪಿಜಿ ಮಾಲೀಕರ ಸಂಘದ ಪ್ರತಿಕ್ರಿಯೆ:
ಈ ಬಗ್ಗೆ ಮಾತನಾಡಿದ ಪಿಜಿ ಮಾಲೀಕರ ಸಂಘದ ಅಧ್ಯಕ್ಷ ಅರುಣ್ ಕುಮಾರ್ ಅವರು, “ಸದ್ಯಕ್ಕೆ ಲಭ್ಯವಿರುವ ಸಿಲಿಂಡರ್ ಗಳಲ್ಲೇ ಮುಂದಿನ ಒಂದು ವಾರ ನಿರ್ವಹಣೆ ಮಾಡುತ್ತೇವೆ. ಕಮರ್ಷಿಯಲ್ ಗ್ಯಾಸ್ ಸಿಗುತ್ತಿಲ್ಲ, ಇದು ಹೀಗೆ ಮುಂದುವರೆದರೆ ಮುಂದೆ ಹೇಗೆ ಎಂಬ ಭೀತಿ ಇದೆ. ಸದ್ಯಕ್ಕೆ ಪಿಜಿ ಬಾಡಿಗೆ ಏರಿಕೆ ಮಾಡದೆ ನಾವೇ ಹೊರೆ ಭರಿಸುತ್ತಿದ್ದೇವೆ. ಆದರೆ ಪರಿಸ್ಥಿತಿ ಸುಧಾರಿಸದಿದ್ದರೆ ಸರ್ಕಾರ ನಮ್ಮ ನೆರವಿಗೆ ಬರಬೇಕಿದೆ,” ಎಂದು ತಿಳಿಸಿದ್ದಾರೆ.
ಯುದ್ಧದ ಹಿನ್ನೆಲೆಯಲ್ಲಿ ಉಂಟಾಗಿರುವ ಇಂಧನ ಕೊರತೆ ಕೇವಲ ಹೋಟೆಲ್ ಗಳಿಗಷ್ಟೇ ಅಲ್ಲದೆ, ಸಾಮಾನ್ಯ ಜನಜೀವನದ ಮೇಲೂ ಪ್ರಭಾವ ಬೀರುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























