ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆ ಬಿಸಿ: ವಾಣಿಜ್ಯ LPG ಸಿಲಿಂಡರ್ ಬೆಲೆ ರೂ. 62.50 ಹೆಚ್ಚಳ, ವಿಮಾನ ಇಂಧನವೂ ದುಬಾರಿ!
ನವದೆಹಲಿ: ಅಕ್ಟೋಬರ್ 1, 2026 ರಿಂದ ಜಾರಿಗೆ ಬರುವಂತೆ ಸಾರ್ವಜನಿಕ ಸ್ವಾಮ್ಯದ ತೈಲ ಕಂಪನಿಗಳು ಗ್ರಾಹಕರಿಗೆ ಮತ್ತೆ ಬೆಲೆ ಏರಿಕೆಯ ಬಿಸಿ ಮುಟ್ಟಿಸಿದ್ದು, ವಾಣಿಜ್ಯ ಬಳಕೆಯ ಎಲ್ ಪಿಜಿ ಸಿಲಿಂಡರ್ ಹಾಗೂ ವಿಮಾನ ಇಂಧನ (ATF) ದರಗಳನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿವೆ.
ಹೋಟೆಲ್ ಮತ್ತು ವಾಣಿಜ್ಯ ಸಂಸ್ಥೆಗಳಲ್ಲಿ ವ್ಯಾಪಕವಾಗಿ ಬಳಸಲಾಗುವ 19 ಕೆ.ಜಿ ತೂಕದ ವಾಣಿಜ್ಯ ಸಿಲಿಂಡರ್ ಬೆಲೆಯನ್ನು ರೂ. 62.50 ರಷ್ಟು ಹೆಚ್ಚಿಸಲಾಗಿದೆ. ಇದರೊಂದಿಗೆ ದೇಶದ ರಾಜಧಾನಿ ದೆಹಲಿಯಲ್ಲಿ ವಾಣಿಜ್ಯ ಸಿಲಿಂಡರ್ ಬೆಲೆ ರೂ. 2,810 ಕ್ಕೆ ತಲುಪಿದೆ. ಸ್ಥಳೀಯ ತೆರಿಗೆಗಳು ಮತ್ತು ವ್ಯಾಟ್ (VAT) ಆಧಾರದ ಮೇಲೆ ವಿವಿಧ ರಾಜ್ಯಗಳಲ್ಲಿ ದರಗಳಲ್ಲಿ ವ್ಯತ್ಯಾಸವಿರಲಿದೆ.
ವಿಮಾನಯಾನ ಸಂಸ್ಥೆಗಳಿಗೆ ತೈಲ ಕಂಪನಿಗಳು ಮತ್ತೊಂದು ಶಾಕ್ ನೀಡಿದ್ದು, ವಿಮಾನ ಇಂಧನ (ATF) ದರವನ್ನು ಪ್ರತಿ ಲೀಟರ್‌ಗೆ ರೂ. 16 ರಷ್ಟು ಭಾರಿ ಏರಿಕೆ ಮಾಡಿವೆ. ಇದರಿಂದಾಗಿ ದೇಶೀಯ ವಿಮಾನ ಇಂಧನ ದರ ರೂ. 121 ರಿಂದ ರೂ. 137 ಕ್ಕೆ ಜಿಗಿದಿದೆ. ಸತತ ಮೂರನೇ ತಿಂಗಳಿನ ಈ ಬೆಲೆ ಏರಿಕೆಯಿಂದಾಗಿ ಮುಂಬರುವ ದಿನಗಳಲ್ಲಿ ವಿಮಾನ ಪ್ರಯಾಣ ದರವೂ ದುಬಾರಿಯಾಗುವ ಸಾಧ್ಯತೆ ದಟ್ಟವಾಗಿದೆ. ವಿಮಾನಯಾನ ಸಂಸ್ಥೆಗಳ ನಿರ್ವಹಣಾ ವೆಚ್ಚದಲ್ಲಿ ಎಟಿಎಫ್ ಪಾಲು ಶೇ. 40ರಷ್ಟಿರುವುದರಿಂದ ಇದು ಕಂಪನಿಗಳ ಮೇಲೆ ಹೆಚ್ಚಿನ ಹೊರೆ ಬೀಳಲಿದೆ.
ಸಾಮಾನ್ಯ ಜನರಿಗೆ ಕೊಂಚ ನಿರಾಳತೆಯೆಂಬಂತೆ, ಗೃಹ ಬಳಕೆಯ ಎಲ್ ಪಿಜಿ ಸಿಲಿಂಡರ್ (14.2 ಕೆ.ಜಿ) ದರದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 14.2 ಕೆ.ಜಿ ಸಿಲಿಂಡರ್ ಬೆಲೆ ರೂ. 942 ರಲ್ಲೇ ಮುಂದುವರಿದಿದೆ. ಅದೇ ರೀತಿ, ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲೂ ಯಾವುದೇ ವ್ಯತ್ಯಯವಾಗಿಲ್ಲ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಕಚ್ಚಾ ತೈಲ ಬೆಲೆಗಳ ಏರಿಳಿತ ಹಾಗೂ ರೂಪಾಯಿ–ಡಾಲರ್ ವಿನಿಮಯ ದರದಲ್ಲಿ ಉಂಟಾಗಿರುವ ಬದಲಾವಣೆಗಳಿಗೆ ಅನುಗುಣವಾಗಿ ಈ ಪರಿಷ್ಕರಣೆ ಮಾಡಲಾಗಿದೆ ಎಂದು ತೈಲ ಕಂಪನಿಗಳು ಸ್ಪಷ್ಟಪಡಿಸಿವೆ. ಎಟಿಎಫ್ ಮತ್ತು ವಾಣಿಜ್ಯ ಎಲ್ ಪಿಜಿ ದರಗಳನ್ನು ಪ್ರತಿ ತಿಂಗಳ ಮೊದಲ ದಿನದಂದು ನಿಯಮಿತವಾಗಿ ಪರಿಷ್ಕರಿಸಲಾಗುತ್ತದೆ.




























