ನವೆಂಬರ್ ಒಳಗೆ ಬಾಕಿ ಬಿಲ್ ಬಿಡುಗಡೆ ಮಾಡದಿದ್ದರೆ ಲಂಚ ತಿಂದ ಶಾಸಕರ ಹೆಸರು ಬಹಿರಂಗ: ಗುತ್ತಿಗೆದಾರರ ಸಂಘ ಎಚ್ಚರಿಕೆ
ಬೆಂಗಳೂರು: ರಾಜ್ಯದಲ್ಲಿ ಕಾಮಗಾರಿಗಳ ಬಾಕಿ ಬಿಲ್ ಬಿಡುಗಡೆ ವಿಚಾರವಾಗಿ ಸರ್ಕಾರದ ವಿರುದ್ಧ ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘ ಮತ್ತೊಮ್ಮೆ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ನವೆಂಬರ್ ಅಂತ್ಯದೊಳಗೆ ಕಾಮಗಾರಿಗಳ ಬಾಕಿ ಬಿಲ್ ಗಳಿಗೆ ಹಣ ಬಿಡುಗಡೆ ಮಾಡದಿದ್ದರೆ, ಡಿಸೆಂಬರ್ ನಲ್ಲಿ ಲಂಚ ಪಡೆದಿರುವ ಶಾಸಕರ ಹೆಸರುಗಳನ್ನು ಬಹಿರಂಗಪಡಿಸಿ, ಅವರನ್ನು ದೇವರ ಮುಂದೆ ಪ್ರಮಾಣ ಮಾಡುವಂತೆ ಆಹ್ವಾನಿಸುವುದಾಗಿ ರಾಜ್ಯ ಸರ್ಕಾರಕ್ಕೆ ಗಂಭೀರ ಎಚ್ಚರಿಕೆ ನೀಡಿದೆ.
ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸಂಘದ ಅಧ್ಯಕ್ಷ ಆರ್. ಮಂಜುನಾಥ್, ಸರ್ಕಾರದ ವಿವಿಧ ಇಲಾಖೆಗಳಿಂದ ಅಂದಾಜು 37,970 ಕೋಟಿ ರೂ.ಗಳಿಗೂ ಹೆಚ್ಚು ಬಾಕಿ ಬಿಲ್ ಗಳು ಬರಬೇಕಿದೆ ಎಂದು ತಿಳಿಸಿದರು.
ಕೆಂಪಣ್ಣ ಅವರ ಹೆಸರನ್ನು ಬಳಸಿಕೊಂಡು ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿದೆ. ಹಿಂದೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ನಮಗೆ ಸಹಾಯ ಮಾಡಲಿಲ್ಲ, ಅಂದು ಫ್ರೀಡಂಪಾರ್ಕ್‌ನಲ್ಲಿ ನಡೆದ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ಡಿ.ಕೆ. ಶಿವಕುಮಾರ್ ಒಂದೇ ಕಂತಿನಲ್ಲಿ ಹಣ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದ್ದರು ಎಂದು ನೆನಪಿಸಿದರು.
ಮುಖ್ಯಮಂತ್ರಿಯಾದ ಬಳಿಕ ಜೂನ್ 30ರಂದು ನಡೆದ ಸಭೆಯಲ್ಲಿ ಬಾಕಿ ಬಿಲ್ ಗಳಿಗೆ ಹಣ ಪಾವತಿಸುವುದಾಗಿ ಭರವಸೆ ನೀಡಿದ್ದರೂ, ಇದುವರೆಗೆ ಅದು ಈಡೇರಿಲ್ಲ. ಒಂದು ವೇಳೆ ನಮ್ಮ ಸಮಸ್ಯೆಗಳು ಬಗೆಹರಿಯದಿದ್ದರೆ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಪಾದಯಾತ್ರೆ ನಡೆಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಆರ್. ಮಂಜುನಾಥ್ ಎಚ್ಚರಿಸಿದ್ದಾರೆ.
ಕಮಿಷನ್ ದಂಧೆ ಗಂಭೀರ ಆರೋಪ: ಹಿಂದಿನ ಸರ್ಕಾರಕ್ಕಿಂತ ಈಗಿನ ಸರ್ಕಾರದಲ್ಲಿ ಕಮಿಷನ್ ದಂಧೆ ಹೆಚ್ಚಾಗಿದೆ. ಕಮಿಷನ್ ಕೊಟ್ಟವರಿಗೆ ಮಾತ್ರ ಬಿಲ್ ಪಾವತಿಸಲಾಗುತ್ತಿದೆ. ಕಮಿಷನ್ ಕೊಟ್ಟರಷ್ಟೇ ಶಾಸಕರು ಭೂಮಿ ಪೂಜೆಗೆ ಬರುತ್ತಾರೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಶಾಸಕರ ವಿರುದ್ಧ ಕಿಡಿ: ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಶೇ.75ರಷ್ಟು ಶಾಸಕರು ಟೆಂಡರ್ ಗಳಲ್ಲಿ ಮೂಗು ತೂರಿಸುತ್ತಿದ್ದಾರೆ. ಅನುದಾನವಿಲ್ಲದಿದ್ದರೆ ಯಾವುದೇ ಕಾರಣಕ್ಕೂ ಟೆಂಡರ್ ನಡೆಸಬಾರದು ಎಂದು ಸಂಘ ಆಗ್ರಹಿಸಿದೆ.




























