ರಾಷ್ಟ್ರಪತಿ ಪದಕ ಪಡೆದ ಪೊಲೀಸ್ ಉಪ –ನಿರೀಕ್ಷಕ ರಾಮ ಪೂಜಾರಿಯವರಿಗೆ ದಲಿತ ಸಂಘರ್ಷ ಸಮಿತಿಯಿಂದ ಅಭಿನಂದನೆ

ಮಂಗಳೂರು: 2024 ನೇ ವರ್ಷದ ಗಣರಾಜ್ಯೋತ್ಸವದ ಅಂಗವಾಗಿ ಭಾರತದ ರಾಷ್ಟ್ರಪತಿ ಪದಕ ಪಡೆದ ಬಜ್ಪೆ ಪೊಲೀಸ್ ಠಾಣೆಯ ಸಹಾಯಕ ಪೊಲೀಸ್ ಉಪ -ನಿರೀಕ್ಷಕರಾದ ರಾಮ ಪೂಜಾರಿಯವರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ (ರಿ )ಪ್ರೊ. ಬಿ. ಕೃಷ್ಣಪ್ಪ ಸ್ಥಾಪಿತ ದ.ಕ.ಜಿಲ್ಲಾ ಸಮಿತಿಯ ವತಿಯಿಂದ ಬಜ್ಪೆಯಲ್ಲಿ ಅಭಿನಂದಿಸಲಾಯಿತು.
ಜಿಲ್ಲಾ ಸಂಚಾಲಕರಾದ ರಘು. ಕೆ. ಎಕ್ಕಾರು ಪ್ರಾಸ್ತಾವಿಕವಾಗಿ ಮಾತನಾಡಿ, ರಾಮ ಪೂಜಾರಿಯವರು ತನ್ನ ಸೇವಾವಧಿಯಲ್ಲಿ ರಾಷ್ಟ್ರಪತಿ ಪದಕ ಪಡೆಯುವ ಮೂಲಕ ನಮ್ಮ ಊರಿನ ಮತ್ತು ಬಜ್ಪೆ ಪೊಲೀಸ್ ಇಲಾಖೆಯ ಕೀರ್ತಿ ಯನ್ನು ರಾಜ್ಯ ಹಾಗೂ ದೇಶ ಮಟ್ಟಕ್ಕೆ ಏರಿಸಿದ್ದಾರೆ. ಅವರು ತನ್ನ ಕರ್ತವ್ಯದ ಅವಧಿಯಲ್ಲಿ ಬಹಳಷ್ಟು ಕ್ಲಿಷ್ಟಕರವಾದ ಪ್ರಕರಣಗಳನ್ನು ಭೇದಿಸಿ ಸಂತ್ರಸ್ತರಿಗೆ ನ್ಯಾಯವನ್ನು ಒದಗಿಸಿದ್ದಾರೆ. ಅರ್ಹವಾಗಿಯೇ ಅವರಿಗೆ ರಾಷ್ಟ್ರಪತಿ ದೊರಕಿರುವುದು ನಮಗೆಲ್ಲರಿಗೂ ಖುಷಿಯ ವಿಚಾರ. ನಾವು ಅವರನ್ನುಹೆಮ್ಮೆಯಿಂದ ಅಭಿನಂದಿಸುತ್ತಿದ್ದೇವೆ ಎಂದರು.
ಅಭಿನಂದನಾ ಸಭೆಯನ್ನು ಉದ್ದೇಶಿಸಿ ದ.ಸಂ.ಸ. ರಾಜ್ಯ ಸಂಘಟನಾ ಸಂಚಾಲಕರಾದ ಎಂ. ದೇವದಾಸ್ ಮಾತನಾಡಿ, ಈ ದೇಶದ ನಾಗರಿಕ ಸಮಾಜವು ನೆಮ್ಮದಿಯಾಗಿ ಬದುಕಲು ಈ ದೇಶದ ಪೊಲೀಸ್ ವ್ಯವಸ್ಥೆ ಕಾರಣ. ಪ್ರತಿಯೊಂದು ಇಲಾಖೆಯಲ್ಲೂ ಒಳ್ಳೆಯ ದಕ್ಷ ಅಧಿಕಾರಿಗಳು ಇರುತ್ತಾರೆ, ಆದರೆ ಕೆಲವೇ ಕೆಲವು ಭ್ರಷ್ಟ ಅಧಿಕಾರಿಗಳಿಂದಾಗಿ ಇಡೀ ಇಲಾಖೆಯನ್ನೇ ಕೆಟ್ಟ ದೃಷ್ಟಿಯಿಂದ ನೋಡುವಂತಾಗಿದೆ ಇದು ಸರಿಯಲ್ಲ. ರಾಮ ಪೂಜಾರಿಯಂತಹ ದಕ್ಷ ಹಾಗೂ ಪ್ರಾಮಾಣಿಕ ಅಧಿಕಾರಿಗಳ ಕಾರ್ಯದಕ್ಷತೆ ಇಂದಿನ ಸಮಾಜಕ್ಕೆ ಮಾದರಿ. ತನ್ನ ಸೇವಾವಧಿಯಲ್ಲಿ ಅವರು ಇನ್ನಷ್ಟು ಉನ್ನತ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಅಭಿನಂದನಾ ಸಭೆಯನ್ನು ಕುರಿತು ಬಜ್ಪೆ ಪೊಲೀಸ್ ಉಪ -ನಿರೀಕ್ಷಕರಾದ ರೇವಣ ಸಿದ್ದಪ್ಪ ಮಾತನಾಡಿ, ಇವತ್ತು ಸಂಘಟನೆಯು ನಮ್ಮ ಸಿಬ್ಬಂದಿಗೆ ಮಾಡಿರುವ ಅಭಿನಂದನೆ ನಮ್ಮ ಇಲಾಖೆಯ ಮೇಲೆ ನಾಗರಿಕ ಸಮಾಜ ಇಟ್ಟಿರುವ ನಂಬಿಕೆ ಹಾಗೂ ಹೊಣೆಗಾರಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ. ಪೊಲೀಸ್ ಇಲಾಖೆಯು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಲು ನಿಮ್ಮ ಸಹಕಾರ ಅತ್ಯಗತ್ಯ ಎಂದರು.
ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಸಹಾಯಕ ಉಪ -ನಿರೀಕ್ಷಕರಾದ ರಾಮ ಪೂಜಾರಿ, ನಾನು ಯಾವುದೇ ಪ್ರಶಸ್ತಿಯ ನಿರೀಕ್ಷೆಯನ್ನಿಟ್ಟು ಕೆಲಸ ಮಾಡಿಲ್ಲ, ಸಂತ್ರಸ್ತರಿಗೆ ನ್ಯಾಯ ಒದಗಿಸುವುದು ಪ್ರತಿಯೊಬ್ಬ ಸರಕಾರಿ ನೌಕರನ ಕರ್ತವ್ಯ. ನಾನು ನನ್ನ ಕರ್ತವ್ಯ ಪಾಲಿಸಿದ್ದೇನೆ. ನನಗೆ ಲಭಿಸಿರುವ ರಾಷ್ಟ್ರಪತಿ ಪದಕ ಇಲಾಖೆಯ ಪ್ರತಿಯೊಬ್ಬ ಸಿಬ್ಬಂದಿಗೂ ಸಿಕ್ಕಿರುವ ಗೌರವ. ಪ್ರಶಸ್ತಿ ಮತ್ತು ನೀವು ಸಲ್ಲಿಸಿರುವ ಅಭಿನಂದನೆ ನನ್ನ ವೈಯಕ್ತಿಕ ಹಾಗೂ ಇಲಾಖೆಯ ಜವಾಬ್ದಾರಿಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.
ಕೃಷ್ಣಾನಂದ.ಡಿ. ಕಾರ್ಯಕ್ರಮ ನಿರ್ವಹಿಸಿದರು. ಅಭಿನಂದನಾ ಸಭೆಯಲ್ಲಿ ದ. ಸಂ. ಸ. ಜಿಲ್ಲಾ ಸಂಘಟನಾ ಸಂಚಾಲಕರಾದ ಬಾಲಕೃಷ್ಣ ಕುಂದರ್, ದಲಿತ ಕಲಾ ಮಂಡಳಿ ಜಿಲ್ಲಾ ಸಂಚಾಲಕ ಸಂಕಪ್ಪ ಕಾಂಚನ್, ಮಂಜಪ್ಪ ಪುತ್ರನ್, ತಾಲೂಕು ಸಂಘಟನಾ ಸಂಚಾಲಕರಾದ ರುಕ್ಕಯ್ಯ ಕರಂಬಾರು, ದೊಂಬಯ್ಯ ಕಟೀಲು, ಎಕ್ಕಾರು ಗ್ರಾಮ ಸಂಚಾಲಕರಾದ ಪರಮೇಶ್ವರ್, ಪೇಜಾವರ ಗ್ರಾಮ ಸಂಚಾಲಕ ಲಿಂಗಪ್ಪ ಕುಂದರ್, ಕರಂಬಾರು ಗ್ರಾಮ ಸಂಚಾಲಕ ರುಕ್ಕಯ್ಯ, ಸಿದ್ಧಾರ್ಥನಗರ ಗ್ರಾಮ ಸಂಚಾಲಕ ಸತೀಶ್ ಸಾಲ್ಯಾನ್, ಮುಂತಾದವರು ಉಪಸ್ಥಿತರಿದ್ದರು.