ಧರ್ಮಸ್ಥಳ ಪ್ರಕರಣ: ಬಿಜೆಪಿ ನಾಯಕರು ಎಸ್ ಐಟಿ ತನಿಖೆಗೆ ಸಹಕರಿಸಲಿ: ಅಪಪ್ರಚಾರ ಮಾಡುತ್ತಿರುವವರು ಯಾರು?

dharmasthala
16/08/2025

ಬೆಂಗಳೂರು: ಧರ್ಮಸ್ಥಳ ಗ್ರಾಮದ ವಿವಿಧ ಸ್ಥಳಗಳಲ್ಲಿ ಮೃತದೇಹಗಳನ್ನು ಹೂತು ಹಾಕಿರುವ ಬಗ್ಗೆ ಸಾಕ್ಷಿ ದೂರುದಾರನ ಹೇಳಿಕೆಯಂತೆ ಎಸ್ ಐಟಿ ಅಧಿಕಾರಿಗಳು ಕಳೇಬರ ಹೊರ ತೆಗೆಯುವ ಕಾರ್ಯಾಚರಣೆ ಮುಂದುವರಿಸಿದ್ದಾರೆ. ಈ ನಡುವೆ ಬಿಜೆಪಿ ರಾಜ್ಯ ಸರ್ಕಾರದ ಕ್ರಮವನ್ನು ಖಂಡಿಸಿ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದು ಧರ್ಮಸ್ಥಳ ದೇವಾಲಯದ ಮೇಲಿನ ಅಪಪ್ರಚಾರ, ದಾಳಿ ಎಂದು ವಿಧಾನಸಭೆಯಲ್ಲಿ ಧ್ವನಿಯೆತ್ತಿದೆ. ಬಿಜೆಪಿ ಈ ನಡೆ ಇದೀಗ ಕರಾವಳಿಯಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದೆ.  ಅನಾಮಿಕನ ಹೇಳಿಕೆಯೇ ಸುಳ್ಳು ಎನ್ನುವಂತೆ ಬಿಜೆಪಿ ನಾಯಕರು ಮತ್ತು ಭಕ್ತರು ಹೇಳಿಕೊಳ್ಳುತ್ತಿದ್ದಾರೆ. ಕೇವಲ  ಎರಡೇ ಸ್ಥಳಗಳಲ್ಲಿ ಕಳೇಬರ ಸಿಕ್ಕಿರೋದು, ನೂರಾರು ಮೃತದೇಹ ಸಿಗುತ್ತೆ ಅಂತ ಆತ ಹೇಳಿದ್ದ ಎಂಬೆಲ್ಲ ಆರೋಪಗಳನ್ನು ಅನಾಮಿಕನ ವಿರುದ್ಧ ಹೊರಿಸಲಾಗಿದೆ. ಆದರೂ ಎಸ್ ಐಟಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಬಿಜೆಪಿ ನಾಯಕರು ಹಾಗೂ ಭಕ್ತರು ಹೇಳುವಂತೆ, ಅನಾಮಿಕನ ಹೇಳಿಕೆ ಸುಳ್ಳೇ ಆಗಿದ್ದರೆ, ಎಸ್ ಐಟಿ ತನಿಖೆಗೆ ಅವರು ಸಹಕರಿಸುವುದು ಉತ್ತಮವಲ್ಲವೇ? ತನಿಖೆ ಮುಗಿದ ಮೇಲೆ ಆತ ಹೇಳಿರುವುದು ಸುಳ್ಳಾದರೆ, ಆತನಿಗೆ ಶಿಕ್ಷೆಯಾಗುತ್ತದೆ. ಮಾತ್ರವಲ್ಲದೇ ಕ್ಷೇತ್ರದ ಬಗ್ಗೆ ಇರುವ ಕಳಂಕವನ್ನು ಶಾಶ್ವತವಾಗಿ ತೊಳೆದಂತಾಗುತ್ತದೆಯಲ್ಲವೇ? ತನಿಖೆಗೆ ಅಡ್ಡಿಪಡಿಸುವಂತೆ ಹೇಳಿಕೆ ನೀಡುವುದು, ತನಿಖೆಯನ್ನೇ ನಿಲ್ಲಿಸಿ ಎಂದು ಹೇಳುವುದು ಎಷ್ಟು ಸರಿ? ತನಿಖೆ ಮುಂದುವರಿಯಲು ಬಿಜೆಪಿ ನಾಯಕರು, ಭಕ್ತರು ಸಹಕರಿಸಲಿ, ಅನಾಮಿಕ ಎಲ್ಲೆಲ್ಲಿ ಹೂತು ಹಾಕಿದ್ದೇನೆ ಅಂತ ಹೇಳುತ್ತಿದ್ದಾನೋ ಅಲ್ಲೆಲ್ಲ, ಅಧಿಕಾರಿಗಳು ಅಗೆಯಲಿ, ಆತ ಹೇಳುತ್ತಿರುವಂತೆಯೇ ಪ್ರಕೃತಿಕ ಬದಲಾವಣೆಯಿಂದ ಸ್ಥಳವನ್ನ ಗುರುತಿಸಲು ಆತನಿಗೆ ಕಷ್ಟವಾದರೆ, ಆತನಿಗೆ ಇನ್ನಷ್ಟು ಅವಕಾಶಗಳನ್ನು ಕೊಡಲಿ, ಬೇರೆ ಬೇರೆ ತಂತ್ರಜ್ಞಾನವನ್ನು ಬಳಕೆ ಮಾಡಿ ಕೂಡ ಹುಡುಕಾಟಕ್ಕೆ ಅವಕಾಶ ಕೊಡಲಿ, ಆತನಿಗೆ ಎಲ್ಲ ಅವಕಾಶಗಳನ್ನು ಕೊಟ್ಟ ಮೇಲೂ ಕಳೇಬರ ಸಿಗದೇ ಹೋದರೆ ನಂತರ ಆತನ ಮೇಲೆ ಕಾನೂನಿನ ಪ್ರಕಾರ ಕ್ರಮಕೈಗೊಳ್ಳಲಿ, ಮಾತ್ರವಲ್ಲದೇ ಇದರಿಂದಾಗಿ  ಕ್ಷೇತ್ರದ ಮೇಲೆ ಮತ್ತು ಆ ಒಂದು ಕುಟುಂಬದ ಮೇಲೆ ಜನರು ಇಟ್ಟಿರುವ ನಂಬಿಕೆ ಇನ್ನಷ್ಟು ಹೆಚ್ಚಾಗಲು ಬಿಜೆಪಿ ಅವಕಾಶ ಮಾಡಿಕೊಡುವುದು ಉತ್ತಮವಲ್ಲವೇ?

ಬಿಜೆಪಿ ನಾಯಕರು ಹೇಳುತ್ತಿರುವಂತೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ, ಯೂಟ್ಯೂಬರ್ ಗಳು ಅಪ ಪ್ರಚಾರ ಮಾಡುತ್ತಿದ್ದಾರೆ ಮೊದಲಾದ ವಿಚಾರಗಳು ಎಷ್ಟು ಸಮರ್ಥನೀಯ? ಉದಾಹರಣೆಗೆ, ಚಿತ್ರನಟ ದರ್ಶನ್ ಪ್ರಕರಣದಲ್ಲಿ ಕನ್ನಡದ ಮುಖ್ಯವಾಹಿನಿ ಮಾಧ್ಯಮಗಳ ಮುಖ್ಯಸ್ಥರೇ ದರ್ಶನ್ ವಿರುದ್ಧ ವೈಯಕ್ತಿಕ ದಾಳಿ ನಡೆಸಿದ್ದರು. ಏಕವಚನದಲ್ಲಿ ಬೈದಿದ್ದರು, ಹೈವಾನ, ದನ ಇದ್ದಂಗಿದ್ದಾನೆ ಎಂದಿದ್ದರು. ದರ್ಶನ್ ಮತ್ತು ಪವಿತ್ರಾ ನಡುವಿನ ಸ್ನೇಹವನ್ನು ಅಸಹ್ಯವಾಗಿ ಬಿಂಬಿಸಿದ್ದರು. ಯಾಕೆಂದರೆ ನಟ ದರ್ಶನ್ ಆರೋಪಿತ ಸ್ಥಾನದಲ್ಲಿದ್ದರು. ಆದರೆ ಧರ್ಮಸ್ಥಳ ಗ್ರಾಮದಲ್ಲಿ ನಡೆಯುತ್ತಿರುವ ಘಟನೆಗಳ ಬಗ್ಗೆ ಯೂಟ್ಯೂಬರ್ ಗಳು ಆರೋಪಿತ ಸ್ಥಾನದಲ್ಲಿರುವವರ ಬಗ್ಗೆ ಮಾತನಾಡಬಾರದು, ಅವಹೇಳನ ಮಾಡುತ್ತಿದ್ದಾರೆ ಅಂತೆಲ್ಲ ಆರೋಪ ಮಾಡುತ್ತಿದ್ದಾರೆ. ಹಾಗೆಂದ ಮಾತ್ರಕ್ಕೆ ಅದು ಸರಿ ಎಂದಲ್ಲ, ಆರೋಪಿತ ಸ್ಥಾನದಲ್ಲಿರುವವರ ವಿರುದ್ಧ ಸಾರ್ವಜನಿಕವಾಗಿ ಇಂತಹ ಮಾತುಗಳು ಕೇಳಿಬರುವುದು ಸಹಜ. ಅಲ್ಲದೇ ಇದು ವಾಕ್ ಸ್ವಾತಂತ್ರ್ಯವನ್ನ ಪ್ರತಿಬಿಂಬಿಸುತ್ತದೆ. ಎಸ್ ಐಟಿ ತನಿಖೆಯನ್ನು ಬೆಂಬಲಿಸಿದರೆ, ಸತ್ಯಾಂಶ ತಿಳಿಯುತ್ತದೆ. ಎಲ್ಲ ಕಳಂಕಗಳೂ ತೊಳೆದು ಹೋಗುತ್ತದೆ. ತಪ್ಪು ಮಾಡದಿದ್ದರೆ, ನಮ್ಮ ಹೆಗಲು ಮುಟ್ಟಿ ನೋಡಿಕೊಳ್ಳುವ ಅಗತ್ಯವೇ ಇಲ್ಲ ಎನ್ನುವುದು ವಾಸ್ತವ.

ಇನ್ನೊಂದೆಡೆ ಅಪಪ್ರಚಾರಗಳ ಬಗ್ಗೆ ಚರ್ಚೆ ಆಗ್ತಿದೆ.  ಅಪಪ್ರಚಾರ ಇಂತಹ ಕಡೆಯವರೇ ಮಾಡುತ್ತಿದ್ದಾರೆ ಎಂದು ಹೇಳಲಾಗುವುದಿಲ್ಲ. ಯಾಕೆಂದರೆ ಸೌಜನ್ಯಳ ಮನೆಯವರು ಸುಂದರವಾದ ಮನೆ ಕಟ್ಟಿದ್ದಾರೆ ಅಂತ ಒಂದು ತಂಡ ಅಪಪ್ರಚಾರ ಮಾಡುತ್ತಿಲ್ಲವೇ? ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣನವರ್, ಸಮೀರ್ ಎಂ.ಡಿ., ಕುಡ್ಲ ರಾಂಪೇಜ್ ಕೋಟಿ ಕೋಟಿ ಹಣ ಮಾಡುತ್ತಿದ್ದಾರೆ ಅಂತ ಅಪಪ್ರಚಾರ ಮಾಡುತ್ತಿರುವವರು ಯಾರು? ಹಾಗೆಯೂ ಅವರು ಹಣಕ್ಕಾಗಿ ಅಪಪ್ರಚಾರ ಮಾಡುತ್ತಿದ್ದಾರೆ ಎಂದಾದರೆ, ಹಣಕೊಟ್ಟವರು ಯಾರು? ಯಾವ ಕಾರಣಕ್ಕಾಗಿ ಅವರಿಗೆ ಹಣ ಕೊಟ್ಟಿರಿ, ಹಣಕೊಟ್ಟು ಮುಚ್ಚಿ ಹಾಕಿಕೊಳ್ಳಬೇಕಾದದ್ದು ಏನು? ಯಾವ ರೂಪದಲ್ಲಿ ಹಣಕೊಟ್ಟಿರಿ ಖಾತೆಗೆ ಜಮಾ ಮಾಡಿದಿರಾ? ಕ್ಯಾಶ್ ಕೊಟ್ಟಿದ್ದೀರಾ? ಯಾವಾಗ ಕೊಟ್ಟಿದ್ದೀರಿ? ಎಲ್ಲಿ ಕೊಟ್ಟಿದ್ದೀರಿ ಎನ್ನುವುದನ್ನೂ ಬಹಿರಂಗಪಡಿಸಿದರೆ, ಅಥವಾ ಎಸ್ ಐಟಿಗೆ ದೂರು ನೀಡಿದರೆ ಸುಲಭವಾಗಿ ಪ್ರಕರಣ ಒಂದು ಹಂತಕ್ಕೆ ತಲುಪಲು ಸಾಧ್ಯವಾಗುತ್ತದೆ ಅಲ್ಲವೇ? ಹಾಗೆಯೇ ತಿಮರೋಡಿ ತಂಡ ಕೂಡ ತಮ್ಮಲ್ಲಿರುವ ಸಾಕ್ಷಿಗಳನ್ನು ಎಸ್ ಐಟಿಗೆ ನೀಡಲಿ ಈ ಮೂಲಕ ಪ್ರಕರಣದ ತನಿಖೆಗೆ ಸಹಕರಿಸುವುದು ಉತ್ತಮವಲ್ಲವೇ?

ಒಟ್ಟಿನಲ್ಲಿ ರಾಜ್ಯ ಸರ್ಕಾರ ಎರಡೂ ಕಡೆಯ ಚರ್ಚೆಗಳು, ಪರಸ್ಪರ ಆರೋಪಗಳ ಬಗ್ಗೆ ಗಮನ ನೀಡದೇ ಅನಾಮಿಕನ ದೂರಿನ ಆಧಾರದಲ್ಲಿ ಪಾರದರ್ಶಕವಾಗಿ ತನಿಖೆ ನಡೆಸಬೇಕು. ಆತನಿಗೆ ಹೆಚ್ಚು ಅವಕಾಶಗಳನ್ನು ನೀಡಲಿ, ಯಾವುದೇ ಕಾರಣಕ್ಕೂ ವಿಪಕ್ಷ ನಾಯಕರ ಒತ್ತಡಕ್ಕೆ ತಲೆಬಾಗಿ ತನಿಖೆ ಸ್ಥಗಿತಗೊಳಿಸದೇ, ತನಿಖೆಯನ್ನು ಪೂರ್ಣಗೊಳಿಸಬೇಕು. ತನಿಖೆ ಸ್ಥಗಿತಗೊಳಿಸಿದರೆ, ಈ ಪ್ರಕರಣಕ್ಕೆ ಒಂದು ತಾರ್ಕಿಕ ಅಂತ್ಯ ನೀಡಲು ಸರ್ಕಾರ ವಿಫಲವಾಗಬಹುದು ಎನ್ನುವುದೇ ಈ ವರದಿಯ ಕಾಳಜಿಯಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version