ಧರ್ಮಸ್ಥಳ: SIT ಮುಖ್ಯಸ್ಥರ ಬದಲಾವಣೆ ಬಗ್ಗೆ ಸರ್ಕಾರ ನಿರ್ಧರಿಸುತ್ತದೆ: ಡಾ.ಜಿ.ಪರಮೇಶ್ವರ್

ಬೆಂಗಳೂರು: ರಾಜ್ಯದ ಆಂತರಿಕ ಭದ್ರತಾ ವಿಭಾಗದ ಪೊಲೀಸ್ ಮಹಾನಿರ್ದೇಶಕರಾದ ಪ್ರಣಬ್ ಮೊಹಂತಿ ಅವರು ಕೇಂದ್ರ ಸೇವೆಗೆ ಅರ್ಹತೆ ಪಡೆದ ಡಿಜಿಪಿಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಸದ್ಯ ಧರ್ಮಸ್ಥಳದಲ್ಲಿ ಹಲವು ಗಂಭೀರ ಅಪರಾಧ ಪ್ರಕರಣಕ್ಕೆ ಸಂಬಂಧಿಸಿದ ತನಿಖೆ ನಡೆಸುತ್ತಿರುವ ಎಸ್ ಐಟಿ ತಂಡಕ್ಕೆ ಮುಖ್ಯಸ್ಥರಾಗಿರುವ ಅವರು ಈ ತಂಡದಲ್ಲಿ ಮುಂದುವರಿಯುತ್ತಾರಾ ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.
ಈ ಸಂಬಂಧ ಬುಧವಾರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಡಾ.ಜಿ.ಪರಮೇಶ್ವರ್, ಎಸ್ ಐಟಿ ಮುಖ್ಯಸ್ಥರಾಗಿರುವ ಐಪಿಎಸ್ ಅಧಿಕಾರಿ ಪ್ರಣಬ್ ಮೊಹಾಂತಿ ಅವರನ್ನು ಬದಲಾಯಿಸುವ ಕುರಿತು ರಾಜ್ಯ ಸರ್ಕಾರ ನಿರ್ಧಾರ ಕೈಗೊಳ್ಳುತ್ತದೆ ಎಂದಿದ್ದಾರೆ.
ಪ್ರಣಬ್ ಮೊಹಂತಿ ಕೇಂದ್ರ ಸೇವೆಗೆ ಹೋದರೆ ಮುಂದಿನ ಕ್ರಮಗಳ ಬಗ್ಗೆ ಚರ್ಚಿಸಲಾಗುತ್ತದೆ. ಕಾನೂನು ಪ್ರಕಾರ, ಏನು ಮಾಡಬಹುದು ಎಂಬುದನ್ನು ಪರಿಶೀಲಿಸಲಾಗುತ್ತದೆ. ಪ್ರಣಬ್ ಮೊಹಾಂತಿ ಕೇಂದ್ರ ಸೇವೆಗೆ ನಿಯೋಜನೆಗೊಂಡರೂ ಕೂಡ ಎಸ್ ಐಟಿ ತನಿಖೆಯನ್ನು ಮುಂದುವರೆಸಬಹುದೇ ಎಂಬುದರ ಬಗ್ಗೆಯೂ ಪರಿಶೀಲಿಸಲಾಗುತ್ತಿದೆ ಎಂದರು.
ಕೇಂದ್ರದಲ್ಲಿ ಸೇವೆ ಸಲ್ಲಿಸಬೇಕಾಗಿ ಬಂದರೆ ವಿಶೇಷ ತನಿಖಾ ತಂಡದ ಮುಖ್ಯಸ್ಥರಾಗಿ ಅವರು ಮುಂದುವರಿಯಬಹುದೇ ಅಥವಾ ಅವರನ್ನು ಬದಲಾಯಿಸಬೇಕೇ ಎಂಬ ಬಗ್ಗೆ ನಾವು ಚರ್ಚಿಸುತ್ತೇವೆ. ಕಾನೂನು ಅನುಮತಿಸಿದರೆ ಅವರು ಎಸ್ ಐಟಿ ಮುಖ್ಯಸ್ಥರಾಗಿ ಮುಂದುವರಿಯಬಹುದು. ಒಂದು ವೇಳೆ ಅವರನ್ನು ಬದಲಿಸಬೇಕಾಗಿ ಬಂದರೆ, ಸರ್ಕಾರ ಅದೇ ಶ್ರೇಣಿಯ ಅಧಿಕಾರಿಯನ್ನು ನೇಮಿಸುತ್ತದೆ’ ಎಂದು ಪರಮೇಶ್ವರ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ಎಸ್ ಐಟಿ ತನಿಖೆ ಕುರಿತು ಕೇಳಿದಾಗ, ಧರ್ಮಸ್ಥಳ ಪ್ರಕರಣದ ಎಸ್ ಐಟಿ ತನಿಖೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ತನಿಖೆ ಮುಗಿದು ವರದಿ ಬಂದ ನಂತರ ಮಾತನಾಡಬಹುದು. ಅಲ್ಲಿಯವರೆಗೆ ನಾನು ಮಾತನಾಡುವುದಿಲ್ಲ ಎಂದು ಹೇಳಿದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD