ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ: ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದ ಮುತ್ತಿಗೆಪುರ ಸರ್ಕಾರಿ ಶಾಲೆ
ಚಿಕ್ಕಮಗಳೂರು: ಮುತ್ತಿಗೆಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶೈಕ್ಷಣಿಕ ಸಾಧನೆ ಹಾಗೂ ಸೌಲಭ್ಯಗಳ ಮೂಲಕ ಖಾಸಗಿ ಶಾಲೆಗಳಿಗೆ ಸವಾಲು ಹಾಕುವಂತ ಕಾರ್ಯ ಮಾಡಿ ಜಿಲ್ಲೆಯಾದ್ಯಂತ ಗಮನ ಸೆಳೆದಿದೆ.
ಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ವಿಮಾನದಲ್ಲಿ ಶೈಕ್ಷಣಿಕ ಪ್ರವಾಸ ಕೈಗೊಂಡಿದ್ದು, ಸರ್ಕಾರಿ ಶಾಲಾ ಮಕ್ಕಳಿಗೆ ಇದೇ ಮೊದಲ ಬಾರಿಗೆ ವಿಮಾನ ಪ್ರಯಾಣದ ಅವಕಾಶ ದೊರಕಿರುವುದು ವಿಶೇಷವಾಗಿದೆ.ಈ ಶಾಲೆಯ ವೈಶಿಷ್ಟ್ಯವೇನೆಂದರೆ, ಖಾಸಗಿ ಶಾಲೆಗಳಲ್ಲಿ ದೊರೆಯುವಂತ ಗುಣಮಟ್ಟದ ಶಿಕ್ಷಣ, ಶೈಕ್ಷಣಿಕ ಸೌಲಭ್ಯಗಳು ಮತ್ತು ಸಂಸ್ಕೃತಿಪೂರ್ಣ ವಾತಾವರಣವನ್ನು ಸರ್ಕಾರಿ ಶಾಲೆಯಲ್ಲೇ ಒದಗಿಸಲಾಗುತ್ತಿದೆ. ಇದರಿಂದ ಸಾರ್ವಜನಿಕರಿಂದ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
ಜಿಲ್ಲೆಯಲ್ಲಿ ಮೊದಲ ಬಾರಿಗೆ ಸರ್ಕಾರಿ ಶಾಲಾ ಮಕ್ಕಳಿಗೆ ವಿಮಾನದಲ್ಲಿ ಪ್ರಯಾಣಿಸುವ ಅವಕಾಶ ಕಲ್ಪಿಸುವಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ, ಎಸ್‌ಡಿಎಂಸಿ ಸದಸ್ಯರು, ದಾನಿಗಳು ಹಾಗೂ ಶಾಲಾ ಶಿಕ್ಷಕರು ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಸಹಕಾರ ಮತ್ತು ಸಮರ್ಪಿತ ಪ್ರಯತ್ನಕ್ಕೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಪ್ರವಾಸಕ್ಕೆ ಹೊರಟಿರುವ ಶಾಲಾ ಮಕ್ಕಳ ಸಂತಸಕ್ಕೆ ಮಿತಿ ಇರಲಿಲ್ಲ. ವಿಮಾನ ಪ್ರಯಾಣದ ಅನುಭವವು ಮಕ್ಕಳಲ್ಲಿ ಹೊಸ ಉತ್ಸಾಹ, ಆತ್ಮವಿಶ್ವಾಸ ಹಾಗೂ ಭವಿಷ್ಯದ ಕನಸುಗಳನ್ನು ಬೆಳೆಸುವಲ್ಲಿ ಸಹಕಾರಿಯಾಗಲಿದೆ ಎಂದು ಶಿಕ್ಷಕರು ಅಭಿಪ್ರಾಯಪಟ್ಟಿದ್ದಾರೆ.
ಇತ್ತೀಚಿನ ದಿನಗಳಲ್ಲಿ ‘ಸರ್ಕಾರಿ ಶಾಲೆ’ ಎಂದರೆ ಅಸಡ್ಡೆ ಮನೋಭಾವ ಹೊಂದಿರುವವರಿಗೆ ಉತ್ತರವಾಗಿ, ದಾನಿಗಳ ಸಹಕಾರದಿಂದ ಸುಸಜ್ಜಿತ ಕಟ್ಟಡವನ್ನು ನಿರ್ಮಿಸಿ ಈ ಶಾಲೆ ಇಡೀ ರಾಜ್ಯವೇ ಹೆಮ್ಮೆಪಡುವಂತ ಮಾದರಿಯಾಗಿ ಹೊರಹೊಮ್ಮಿದೆ. ಮುತ್ತಿಗೆಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಈ ಸಾಧನೆ ಸರ್ಕಾರಿ ಶಾಲೆಗಳ ಶಕ್ತಿಯನ್ನು ಮತ್ತೊಮ್ಮೆ ಸಾಬೀತುಪಡಿಸಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























