ಮತದಾರರ ಪಟ್ಟಿ ಮರು ಪರಿಶೀಲನೆಗೆ ಚುನಾವಣಾ ಆಯೋಗ ಸೂಚನೆ: ಇದು ಇಡೀ ದೇಶದ ಮತದಾರರ ಹಕ್ಕಿಗೆ ಸಂದ ಜಯ — ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು: ದೇಶಾದ್ಯಂತ ವಿಶೇಷ ಅಭಿಯಾನದ ಮೂಲಕ ಮತದಾರರ ಪಟ್ಟಿ ಮರುಪರಿಶೀಲನೆ (ASDDO — ಗೈರು, ಸ್ಥಳಾಂತರ, ಮೃತ ಹಾಗೂ ನಕಲಿ ಮತದಾರರ ಪರಿಶೀಲನೆ) ನಡೆಸಲು ಮತ್ತು ಹೆಸರು ಬಿಟ್ಟುಹೋದ ಅರ್ಹ ಮತದಾರರ ಹೆಸರುಗಳನ್ನು ಮರು ಸೇರಿಸಲು ಭಾರತ ಚುನಾವಣಾ ಆಯೋಗವು ಎಲ್ಲಾ ರಾಜ್ಯಗಳ ಚುನಾವಣಾ ಅಧಿಕಾರಿಗಳಿಗೆ ಆದೇಶ ನೀಡಿರುವುದು ಇಡೀ ದೇಶದ ಮತದಾರರ ಹಕ್ಕಿಗೆ ಸಂದ ದೊಡ್ಡ ಜಯ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ್ಣಿಸಿದ್ದಾರೆ.
ವಿಧಾನಸೌಧದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ನಿರ್ಧಾರವು ಅರ್ಹ ಮತದಾರರ ಹಕ್ಕನ್ನು ಕಸಿಯುವ ಸಂಚಿನ ವಿರುದ್ಧ ಸಿಕ್ಕ ಐತಿಹಾಸಿಕ ಗೆಲುವು ಎಂದಿದ್ದಾರೆ.
ರಾಜ್ಯ ಚುನಾವಣಾ ಆಯೋಗದ ಎದುರು ಕಾಂಗ್ರೆಸ್ ಪಕ್ಷ ನಡೆಸಿದ ಧರಣಿಯ ಪರಿಣಾಮವಾಗಿ ಕೇಂದ್ರ ಚುನಾವಣಾ ಆಯೋಗವು ಹೊರಡಿಸಿರುವ ಈ ಆದೇಶವನ್ನು ಸಿಎಂ ಸಂಪೂರ್ಣವಾಗಿ ಸ್ವಾಗತಿಸಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಗೆಲುವು ಮಾತ್ರವಲ್ಲದೆ, ಕರ್ನಾಟಕ ಮತ್ತು ಇಡೀ ದೇಶದ ಮತದಾರರ ಗೆಲುವು ಎಂದು ತಿಳಿಸಿರುವ ಅವರು, ಫಾರ್ಮ್–7ರ ಮೂಲಕ ಯಾವುದೇ ಮತಗಳನ್ನು ಅಕ್ರಮವಾಗಿ ಡಿಲೀಟ್ ಮಾಡಬಾರದು ಎಂದು ಆಯೋಗ ತಿಳಿಸಿದೆ ಎಂದಿದ್ದಾರೆ. ಮೊದಲ ಬಾರಿಗೆ ಮತದಾರರಾಗುವ ಯುವಕರು, ರಾತ್ರಿ ಆಶ್ರಯ ತಾಣಗಳಲ್ಲಿ ವಾಸಿಸುವ ಜನರು, ಕಾರ್ಮಿಕರು ಹಾಗೂ ನಿರಾಶ್ರಿತರಿಗಾಗಿ ಬೂತ್ ಮಟ್ಟದಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ ಹೆಸರು ಸೇರಿಸಲು ಕ್ರಮ ಕೈಗೊಳ್ಳಬೇಕು ಎಂದು ಅವರು ವಿವರಿಸಿದರು.
ಇದೇ ವೇಳೆ ಬಿಜೆಪಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿರುವ ಡಿ.ಕೆ.ಶಿವಕುಮಾರ್, ಸಮಾಜದ ದುರ್ಬಲ ವರ್ಗಗಳು, ದಲಿತರು ಮತ್ತು ಅಲ್ಪಸಂಖ್ಯಾತರ ಮತಗಳನ್ನು ತೆಗೆದುಹಾಕಲು ಬಿಜೆಪಿಯವರು ಅರ್ಜಿಗಳನ್ನು ಸಲ್ಲಿಸಿರುವುದು ನಾಚಿಕೆಗೇಡಿನ ಸಂಗತಿ ಎಂದು ಕಿಡಿಕಾರಿದ್ದಾರೆ. ಇದು ಅವರ ಕ್ರಿಮಿನಲ್ ಪಿತೂರಿ ಮತ್ತು ತಪ್ಪೊಪ್ಪಿಗೆಯಾಗಿದೆ ಎಂದು ಅವರು ಆರೋಪಿಸಿದರು.
ಮತದಾರರ ಹಕ್ಕುಗಳ ರಕ್ಷಣೆಗಾಗಿ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಹೋರಾಟ ಮಾಡಿಕೊಂಡು ಬಂದಿದೆ ಎಂದು ತಿಳಿಸಿದ ಸಿಎಂ, ಎಐಸಿಸಿ ನಾಯಕರಾದ ರಾಹುಲ್ ಗಾಂಧಿ ಮತ್ತು ಮಲ್ಲಿಕಾರ್ಜುನ ಖರ್ಗೆಯವರ ಮಾರ್ಗದರ್ಶನದಲ್ಲಿ ಫ್ರೀಡಂ ಪಾರ್ಕ್‌ನಲ್ಲಿ ಆರಂಭವಾದ ಈ ಹೋರಾಟದ ಫಲವೇ ಇಂದಿನ ಚುನಾವಣಾ ಆಯೋಗದ ಈ ನಿರ್ದೇಶನ ಎಂದು ಹೇಳಿದರು. ಕರ್ನಾಟಕದ ಪ್ರತಿಯೊಬ್ಬ ಪ್ರಜೆಯ ಮತ ಹಾಗೂ ಸಂವಿಧಾನಾತ್ಮಕ ಸಂಸ್ಥೆಗಳನ್ನು ರಕ್ಷಿಸುವುದು ಮುಖ್ಯಮಂತ್ರಿಯಾಗಿ ತಮ್ಮ ಕರ್ತವ್ಯ ಎಂದು ಸ್ಪಷ್ಟಪಡಿಸಿದ ಡಿ.ಕೆ.ಶಿವಕುಮಾರ್, ಈ ಕುರಿತು ಚುನಾವಣಾ ಆಯೋಗಕ್ಕೆ ವಾಸ್ತವ ಸಂಗತಿಗಳು ಹಾಗೂ ದಾಖಲೆಗಳನ್ನು ಮನವರಿಕೆ ಮಾಡಿಕೊಡಲಾಗಿದೆ ಎಂದು ತಿಳಿಸಿದರು.




























