ಪ್ರಧಾನಿ ಮೋದಿ ಕ್ಷಮಿಸಿ ‘ಜೀವದಾನ’ ನೀಡಿದ್ದಾರೆ: ಪ್ರಧಾನಿಗೆ ನಿಂದಿಸಿದ್ದ ಬಾಲಕಿಯ ತಾಯಿಯ ಭಾವನಾತ್ಮಕ ಹೇಳಿಕೆ

pm modi.jpg
02/08/2026

ನವದೆಹಲಿ: ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ನಿಂದನಾತ್ಮಕ ಪದಗಳನ್ನು ಬಳಸಿ ವಿವಾದಕ್ಕೀಡಾಗಿದ್ದ ನೋಯ್ಡಾದ 15 ವರ್ಷದ ಬಾಲಕಿಯನ್ನು ಪ್ರಧಾನಿಯವರೇ ಕ್ಷಮಿಸಿದ ಬೆನ್ನಲ್ಲೇ, ಬಾಲಕಿಯ ತಾಯಿ ಪ್ರಧಾನಿ ಮೋದಿಯವರಿಗೆ ಧನ್ಯವಾದ ಸಲ್ಲಿಸಿದ್ದಾರೆ. ಪ್ರಧಾನಿಯವರ ಈ ಔದಾರ್ಯದ ನಿರ್ಧಾರವು ತಮ್ಮ ಮಗಳಿಗೆ ಹೊಸ ಜೀವನ ಅಥವಾ ‘ಜೀವದಾನ’ ನೀಡಿದೆ ಎಂದು ಅವರು ಕಣ್ಣೀರಿಡುತ್ತಾ ಹೇಳಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಹರಿದಾಡಿದ್ದ ವಿಡಿಯೋದಲ್ಲಿ ಬಾಲಕಿ ಪ್ರಧಾನಿಯವರನ್ನು ನಿಂದಿಸಿದ್ದರು. ಈ ಕುರಿತು ಇತ್ತೀಚೆಗೆ ಪ್ರತಿಕ್ರಿಯಿಸಿದ್ದ ಪ್ರಧಾನಿ ನರೇಂದ್ರ ಮೋದಿ, “ದಾರಿ ತಪ್ಪಿದ ಮಕ್ಕಳ ಮೇಲೆ ಕೋಪ ಅಥವಾ ಪ್ರತೀಕಾರ ತೀರಿಸಿಕೊಳ್ಳುವುದು ಪರಿಹಾರವಲ್ಲ. ಅವರಿಗೆ ಸರಿಯಾದ ದಾರಿ ತೋರಿಸಿ ಕ್ಷಮಿಸುವುದು ನಮ್ಮ ಕರ್ತವ್ಯ” ಎಂದು ಮನವಿ ಮಾಡಿದ್ದರು.

ಪ್ರಧಾನಿಯವರ ಹೇಳಿಕೆಯ ನಂತರ ಮಾತನಾಡಿದ ಬಾಲಕಿಯ ತಾಯಿ, “ಇಂದು ನನ್ನ ಮಗಳ ಹುಟ್ಟುಹಬ್ಬ. ಈ ದಿನ ಪ್ರಧಾನಿ ಮೋದಿಯವರಿಂದ ಆಕೆಗೆ ದೊರೆತ ಅತಿ ದೊಡ್ಡ ಉಡುಗೊರೆ ಎಂದರೆ ಈ ‘ಜೀವದಾನ’. ಅವರು ದೇಶದ ರಾಜನಿದ್ದಂತೆ, ಅವರ ಮುಂದೆ ನಾವೇನೂ ಅಲ್ಲ. ನನ್ನ ಮಗಳು ಮಾಡಿದ ದೊಡ್ಡ ತಪ್ಪನ್ನು ಕ್ಷಮಿಸಿ ದೊಡ್ಡತನ ಮೆರೆದಿದ್ದಾರೆ” ಎಂದು ಕೈಮುಗಿದು ಧನ್ಯವಾದ ಅರ್ಪಿಸಿದರು.

ತಮ್ಮ ಮಗಳ ಭವಿಷ್ಯದ ಕುರಿತು ಆತಂಕ ವ್ಯಕ್ತಪಡಿಸಿದ ತಾಯಿ, “ಮೋದೀಜಿ, ದಯವಿಟ್ಟು ಈ ಮಗಳನ್ನು ದತ್ತು ತೆಗೆದುಕೊಂಡು ಆಕೆಯ ಭವಿಷ್ಯವನ್ನು ಉಜ್ವಲಗೊಳಿಸಿ. ಆಕೆಯ ವಿರುದ್ಧ ದಾಖಲಾಗಿರುವ ಎಫ್ ಐಆರ್ (FIR) ಹಿಂಪಡೆಯಿರಿ. ಆಕೆಗೆ ಇನ್ನೂ 15 ವರ್ಷ ವಯಸ್ಸಾಗಿದ್ದು, ಅಪ್ರಾಪ್ತ ವಯಸ್ಕಳಾಗಿದ್ದಾಳೆ” ಎಂದು ವಿನಂತಿಸಿಕೊಂಡಿದ್ದಾರೆ.
ಪ್ರತಿಭಟನೆಯಲ್ಲಿ ಭಾಗವಹಿಸಿದ ಕೆಲವು ವ್ಯಕ್ತಿಗಳ ಪ್ರಚೋದನೆಗೆ ಒಳಗಾಗಿ ತಮ್ಮ ಮಗಳು ಈ ರೀತಿ ಮಾತನಾಡಿದ್ದಾಳೆ ಎಂದು ಸ್ಪಷ್ಟಪಡಿಸಿದ ತಾಯಿ, “18 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಇನ್ಸ್ಟಾಗ್ರಾಮ್ ಮತ್ತು ಫೇಸ್ ಬುಕ್ ಬಳಕೆಯನ್ನು ನಿಷೇಧಿಸಬೇಕು ಹಾಗೂ ಅವರನ್ನು ರಾಜಕೀಯ ಪ್ರತಿಭಟನೆಗಳಿಂದ ದೂರವಿಡಬೇಕು” ಎಂದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.

ದೆಹಲಿಯ ಜಂತರ್ ಮಂತರ್ ನಲ್ಲಿ ನಡೆದ ಪ್ರತಿಭಟನೆಯಲ್ಲಿ ಈ ಬಾಲಕಿ ಪ್ರಧಾನಿ ಮೋದಿ ವಿರುದ್ಧ ನಿಂದನಾತ್ಮಕ ಹೇಳಿಕೆ ನೀಡಿದ್ದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ನೋಯ್ಡಾ ಪೊಲೀಸರು ಜೀರೋ ಎಫ್ ಐಆರ್ ದಾಖಲಿಸಿದ್ದರು. ತರುವಾಯ ಬಾಲಕಿ ಮತ್ತೊಂದು ವಿಡಿಯೋ ಬಿಡುಗಡೆ ಮಾಡಿ, “ಇದು ನನ್ನ ಮೊದಲ ಹಾಗೂ ಕೊನೆಯ ತಪ್ಪು. ನನ್ನನ್ನು ಕ್ಷಮಿಸಿ” ಎಂದು ಇಡೀ ದೇಶದ ಕ್ಷಮೆಯಾಚಿಸಿದ್ದಳು. ಪ್ರಧಾನಿ ಮೋದಿಯವರ ಕ್ಷಮಾದಾನದ ನಿರ್ಧಾರದ ಬಳಿಕ ಈ ಪ್ರಕರಣ ಸುಖಾಂತ್ಯದತ್ತ ಸಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version