8:33 PM Thursday 20 - November 2025

ಮೋದಿ ಯಾವ ಪುರುಷಾರ್ಥಕ್ಕೆ ರೋಡ್ ಶೋ ಮಾಡ್ತಿದ್ದಾರೆ?: ಸಿದ್ದರಾಮಯ್ಯ, ಪ್ರಧಾನಿ ಮೋದಿ ವಿರುದ್ಧ ಹೆಚ್.ಡಿ.ಕುಮಾರಸ್ವಾಮಿ ವಾಗ್ದಾಳಿ

hd kumaraswamy
06/05/2023

ಚಾಮರಾಜನಗರ: ಹನೂರಿನಲ್ಲಿ ಜೆಡಿಎಸ್ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಪ್ರಧಾನಿ ಮೋದಿ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ.

ಸಿದ್ದರಾಮಯ್ಯನವರು ಕಾಂಗ್ರೆಸ್ ಸಭೆಯಲ್ಲೇ ಕಾಂಗ್ರೆಸ್ ನ್ನು ಮುಗಿಸಿ ಅಂತಾರೆ, ಬಳಿಕ ಇಲ್ಲ, ಇಲ್ಲ, ಬಿಜೆಪಿಯನ್ನು ಮುಗಿಸಿ ಅಂತಾರೆ. ಅವರ ಹೃದಯದಲ್ಲಿ ಇರುವುದನ್ನೇ ಅವರು ಹೇಳುತ್ತಿದ್ದಾರೆ. ಇದು ಅವರ ಸಿದ್ಧಾಂತ, ನಾನು ಅವರಿಂದ ಸಿದ್ಧಾಂತ ಕಲಿಯಬೇಕಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಅಧಿಕಾರದಲ್ಲಿದ್ದಾಗ ಲಿಂಗಾಯತರ ಬಗ್ಗೆ ಮಾತನಾಡಿ, ಈಗ ಲಿಂಗಾಯತರೇ ಕ್ಷಮಿಸಿ ಅಂತ ಹೇಳುತ್ತಿದ್ದಾರೆ. ಇವರು ಜಾತ್ಯತೀತವಾದಿನಾ? ಇವರಿಂದ ಜಾತ್ಯತೀತ ಕಲಿಯಬೇಕಾ? ಎಂದು ಪ್ರಶ್ನಿಸಿದರು.

ಪ್ರತಿ ಸಮಾಜಕ್ಕೆ ದೇವೆಗೌಡರು ಕೊಟ್ಟ ರಾಜಕೀಯ ಶಕ್ತಿನಾ ಇವರ ಕೈಯಲ್ಲಿ ಕೊಡೊಕಾಗುತ್ತಾ? ಐದು ವರ್ಷ ಸರ್ಕಾರ ನಡೆಸಿದ ಸಿದ್ದರಾಮಯ್ಯ ಕೊಟ್ರಾ? ಎಲ್ಲರಿಗಿಂತ ಹೆಚ್ಚಿನ ಅಡ್ಜಸ್ಟ್ಮೆಂಟ್ ರಾಜಕಾರಣ ಸಿದ್ದರಾಮಯ್ಯ ಅವರದು. ಮೊನ್ನೆ ನಾಗಮಂಗಲದಲ್ಲಿ ಭಾಷಣ ಮಾಡಿ ಪಶ್ಚಾತ್ತಾಪಪಡಲಿಲ್ವಾ. ಯಾರನ್ನೋ ಗೆಲ್ಲಿಸಿ ತಪ್ಪು ಮಾಡಿದ್ವಿ ಅಂತಾ ಹೇಳಿಲ್ವಾ, ಅದಕ್ಕಿಂತ ಬೇಕಾ? ಎಂದು ಪ್ರಶ್ನಿಸಿದರು.

ರಾಷ್ಟ್ರೀಯ ಪಕ್ಷಗಳ ವಿರುದ್ಧ ವಾಗ್ದಾಳಿ:

ರಾಜ್ಯದಲ್ಲಿ ಕಳೆದ ಎರಡು ತಿಂಗಳಿನಿಂದ ಬರ್ತಿರುವ ಸಮೀಕ್ಷೆಗಳು ಕೃತಕ. ರಾಷ್ಟ್ರೀಯ ಪಕ್ಷಗಳು ಹಣ ಕೊಟ್ಟು ಜನರ ಭಾವನೆಗಳನ್ನು ಕದಡುವ ಕೆಲಸ ಮಾಡ್ತಿವೆ. ಈ ಸಮೀಕ್ಷೆಗಳಲ್ಲಿ ಯಾವುದೇ ಸತ್ಯಾಂಶವಿಲ್ಲ. ಈ ಸಮೀಕ್ಷೆಗಳು ರಾಷ್ಟ್ರೀಯ ಪಕ್ಷಗಳ ಹಣಕ್ಕೋಸ್ಕರ ಮಾಡಿರುವ ಸಮೀಕ್ಷೆಗಳು. ಈ ಸಮೀಕ್ಷೆಗಳೆಲ್ಲ ಈ ಬಾರಿ ಉಲ್ಟಾ ಹೊಡೆಯುತ್ತವೆ. ಯಾವುದೇ ರಾಷ್ಟ್ರೀಯ ಪಕ್ಷಕ್ಕೂ ಸ್ಪಷ್ಟ ಬಹುಮತ ಸಿಗಲ್ಲ. ಅದು ಅವರ ಕನಸು. ಸಮೀಕ್ಷೆಗಳಲ್ಲಿ ಜೆಡಿಎಸ್ಗೆ ಕಡಿಮೆ ಸ್ಥಾನ ಕೊಟ್ಟಿರುವವರು ಆನಂದಪಡಲಿ ಎಂದು ಅವರು ಹೇಳಿದರು.

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ:

ಮೋದಿ ಜನರಿಗೆ ತೊಂದರೆ ಕೊಟ್ಟು ರೋಡ್ ಶೋ ಮಾಡುತ್ತಿದ್ದಾರೆ. ರೋಡ್ ಶೋನಿಂದ ದುಡಿಯುವ ಜನ ಬೀದಿ ಪಾಲಾಗುತ್ತಿದ್ದಾರೆ. ಯಾವ ಪುರುಷಾರ್ಥಕ್ಕೆ ರೋಡ್ ಶೋ ಮಾಡ್ತಿದ್ದಾರೆ. ನಾಳೆ ನೀಟ್ ಪರೀಕ್ಷೆ ಬರೆಯುವ ಮಕ್ಕಳ ಮೇಲೆ ಪರಿಣಾಮ ಬೀರುತ್ತದೆ. ಮನೆ ಬಾಗಿಲು ತೆಗೆಯಬೇಡಿ, ಓಣಿಯಲ್ಲಿ ಓಡಾಡಬೇಡಿ ಅಂತಾರೆ. ಹಾಗಿದ್ರೆ ರೋಡ್ ಶೋ ಯಾಕೆ ಮಾಡ್ತೀರಾ? ಯಾರೋ ಕೆಲವರನ್ನು ತುಂಬಿಕೊಬಂದು ನಿಲ್ಲಿಸಿ ಮೋದಿ ಮೋದಿ ಎಂದು ಕೂಗಿಸಿಕೊಂಡು ಹೋಗ್ತಾರೆ. ಇದರಿಂದ ಜನರಿಗೆ ತೊಂದರೆಯೆ ಹೊರತು ಬಿಜೆಪಿಗೆ ಲಾಭ ಇಲ್ಲ ಎಂದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/JdaVhZJabeA0V7XQ5ZJp92

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

 

ಇತ್ತೀಚಿನ ಸುದ್ದಿ

Exit mobile version