ಗಣಪತಿಯ ವಿಗ್ರಹಕ್ಕೆ ಚಪ್ಪಲಿ ಹಾರ: ಆರೋಪಿಯ ಬಂಧನ

ಹಾಸನ: ಬೇಲೂರಿನಲ್ಲಿ ದೇವಾಲಯದ ಒಳಗಿನ ಗಣಪತಿಯ ವಿಗ್ರಹಕ್ಕೆ ಚಪ್ಪಲಿ ಹಾರ ಹಾಕಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸಿಸಿ ಟಿವಿ ಕ್ಯಾಮರ ದೃಶ್ಯವನ್ನು ಆಧರಿಸಿ ಪೊಲೀಸರು ಕ್ರಮಕೈಗೊಂಡಿದ್ದಾರೆ. ಪುರಸಭೆ ಆವರಣದಲ್ಲಿರುವ ಗಣಪತಿ ಮೂರ್ತಿಗೆ ಮಹಿಳೆಯೊಬ್ಬರು ಚಪ್ಪಲಿ ಹಾರ ಹಾಕಿ ಹೊರ ಬರುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು. ಸದ್ಯ ಮಹಿಳೆಯನ್ನ ಪೊಲೀಸರು ಬಂಧಿಸಿದ್ದು, ಲೀಲಮ್ಮ ಎಂಬ ಮಹಿಳೆ ಬಂಧಿತ ಆರೋಪಿಯಾಗಿದ್ದಾರೆ. ಬಾಣಾವರ PSI ಸುರೇಶ್ ನೇತೃತ್ವದ ತಂಡ ತನಿಖೆ ನಡೆಸಿ ಮಹಿಳೆಯನ್ನು ಬಂಧಿಸಿದ್ದಾರೆ.
ಬಂಧಿತ ಲೀಲಮ್ಮಗೆ ಮಾನಸಿಕ ಸ್ಥಿಮಿತವಿಲ್ಲವೆನ್ನುವ ಮಾಹಿತಿಯಿದೆ. ನಿನ್ನೆ ರಾತ್ರಿ 8.30ಕ್ಕೆ ಹಾಸನದಿಂದ ಬೇಲೂರು ಕಡೆ ಬಸ್ ಹತ್ತಿದ್ದಳು. ನಂತರ ಚಿಕ್ಕಮಗಳೂರಿಗೆ ಹೋಗಿ ವಾಪಸ್ ಬೇಲೂರಿಗೆ ಬಂದಿದ್ದಳು. ಬೇಲೂರಿನಲ್ಲಿ ಬಸ್ ಇಳಿದು ಪುರಸಭೆ ಆವರಣಕ್ಕೆ ತೆರಳಿದ್ದ ಮಹಿಳೆಯ ಸಂಪೂರ್ಣ ಚಲನವಲನ ಸಿಸಿಟಿವಿಯಲ್ಲಿ ಸೆರೆಯಾಗಿದೆ. ದೇಗುಲಕ್ಕೆ ಹೋಗಿ ಬಂದ ಬಳಿಕ ಮತ್ತೆ ಹಾಸನಕ್ಕೆ ಬಂದಿರುವ ಮಾಹಿತಿ ಇದೆ. ಹಾಸನದ ವಿಜಯನಗರದಲ್ಲಿರುವ ಮನೆ ಬಳಿ ವಶಕ್ಕೆ ಪಡೆದಿದ್ದು, ಲೀಲಮ್ಮಗೆ ಸದ್ಯಕ್ಕೆ ವೈದ್ಯಕೀಯ ಪರೀಕ್ಷೆ ಅಗತ್ಯವಿದೆ. ಲೀಲಮ್ಮರನ್ನು ವಶಕ್ಕೆ ಪಡೆದು ಘಟನೆ ಬಗ್ಗೆ ತನಿಖೆ ನಡೆಸಲಾಗುತ್ತಿದೆ. ಈ ಹಿಂದೆ ಮನೆಯಲ್ಲೂ ಇದೇ ರೀತಿ ವರ್ತಿಸಿದ್ದ ಬಗ್ಗೆ ಮಾಹಿತಿಯಿದೆ ಎಂದು ಘಟನೆಗೆ ಸಂಬಂಧಿಸಿದಂತೆ ಹಾಸನ ಪೊಲೀಸ್ ವರಿಷ್ಠಾಧಿಕಾರಿ ಮೊಹಮ್ಮದ್ ಸುಜೀತಾ ಪ್ರತಿಕ್ರಿಯೆ ನೀಡಿದ್ದಾರೆ.
ಕಿಡಿಕಾರಿದ್ದ ಸಿ.ಟಿ.ರವಿ:
ಬೇಲೂರು ಪುರಸಭೆ ಗಣಪತಿಗೆ ಚಪ್ಪಲಿ ಹಾರ ಹಿನ್ನೆಲೆ ಚಿಕ್ಕಮಗಳೂರಿನಲ್ಲಿ ಪರಿಷತ್ ಸದಸ್ಯ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದರು. ಕೋಮು ಗಲಭೆ ಸೃಷ್ಟಿಯ ಭಾಗವಾಗಿ ಇದನ್ನು ಮಾಡಿದ್ದಾರೆ ಅಂತ ಆರೋಪಿಸಿದ್ದರು.
ಸಂಚಿನ ಭಾಗವಾಗಿಯೇ ಚಪ್ಪಲಿ ಹಾರ ಹಾಕಿದ್ದಾರೆ, ಸಜ್ಜನರಿಗೆ ಸಿಟ್ಟು ಬರಿಸಿದ್ರೆ ಯಾರು ಉಳಿಯುವುದಿಲ್ಲ, ಕೇಸ್ ಹಾಕೋದು ಮಾತ್ರವಲ್ಲ, ಮನೆಗೆ ಬುಲ್ಡೋಜರ್ ಹೊಡೆಸಿ, ತಪ್ಪಿತಸ್ಥರಿಗೆ ರಕ್ಷಣೆ ಮಾಡೋಕೆ ಮುಂದಾದ್ರೆ ಸಮಾಜವೇ ಬುಲ್ಡೋಜರ್ ತೆಗೆದುಕೊಂಡು ಹೋಗಬೇಕಾಗುತ್ತೆ, ನಾನು ಬೇಲೂರಿಗೆ ಹೋಗ್ತಾ ಇದ್ದೇನೆ ಎಂದು ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿದ್ದರು.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD