ಸ್ಟವ್ ಹೊತ್ತಿಸುತ್ತಿದ್ದಂತೆಯೇ ಗ್ಯಾಸ್ ಸಿಲಿಂಡರ್ ಸ್ಫೋಟ: ತಾಯಿ ಮತ್ತು ಮೂವರು ಮಕ್ಕಳ ಸ್ಥಿತಿ ಚಿಂತಾಜನಕ

27/01/2024
ಕಲಬುರಗಿ: ಚಹಾ ಮಾಡಲು ಸ್ಟವ್ ಹೊತ್ತಿಸುತ್ತಿದ್ದಂತೆಯೇ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು, ತಾಯಿ ಮತ್ತು ಮೂವರು ಮಕ್ಕಳಿಗೆ ಗಂಭೀರವಾಗಿ ಗಾಯಗಳಾದ ಘಟನೆ ಕಲಬುರಗಿ ಜಿಲ್ಲೆಯ ಜೇವರ್ಗಿ ತಾಲೂಕಿನ ಇಟಗಾ ಗ್ರಾಮದಲ್ಲಿ ನಡೆದಿದೆ.
ಅಂಜನಾಬಾಯಿ(28) ಖುಷಿ(9), ಕಾರ್ತಿಕ್(8), ಕೀರ್ತಿ(5) ಗಾಯಗೊಂಡವರು ಎಂದು ಗುರುತಿಸಲಾಗಿದೆ. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿದ್ದು, ಕಲಬುರಗಿಯ ಖಾಸಗಿ ಆಸ್ಪತ್ರೆಯಲ್ಲಿ ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದು ಬಂದಿದೆ.
ಗ್ರಾಮದೇವತೆ ಯಲ್ಲಮ್ಮ ದೇವಿಯ ಜಾತ್ರೆಗೆ ಹೋಗಿ ಬಂದಿದ್ದ ಅಂಜನಾಬಾಯಿ ಚಹಾ ಮಾಡಲೆಂದು ಸ್ಟವ್ ಹೊತ್ತಿಸಲು ಮುಂದಾಗಿದ್ದಾರೆ. ಈ ವೇಳೆ ಏಕಾಏಕಿ ಸಿಲಿಂಡರ್ ಸ್ಫೋಟವಾಗಿದೆ ಎನ್ನಲಾಗಿದೆ. ಘಟನೆ ಸಂಬಂಧ ನೆಲೋಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.