ಗೋಲ್ಡ್ ಸ್ಮಗ್ಲಿಂಗ್ ಕೇಸ್: ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್‌ಗೆ ಬರೋಬ್ಬರಿ ₹89 ಕೋಟಿ ದಂಡ ವಿಧಿಸಿದ ಕಸ್ಟಮ್ಸ್ ಇಲಾಖೆ!
ಬೆಂಗಳೂರು: ಅಂತರರಾಷ್ಟ್ರೀಯ ಮಟ್ಟದ ದೊಡ್ಡ ಪ್ರಮಾಣದ ಚಿನ್ನ ಕಳ್ಳಸಾಗಣೆ (ಗೋಲ್ಡ್ ಸ್ಮಗ್ಲಿಂಗ್) ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ಯಾಂಡಲ್ ವುಡ್ ನಟಿ ರನ್ಯಾ ರಾವ್ ಅವರಿಗೆ ಕಸ್ಟಮ್ಸ್ ಇಲಾಖೆ ಬಿಗ್ ಶಾಕ್ ನೀಡಿದ್ದು, ಬರೋಬ್ಬರಿ 89 ಕೋಟಿ ರೂ. ದಂಡ ವಿಧಿಸಿದೆ.
ಕಸ್ಟಮ್ಸ್ ಜಂಟಿ ನಿರ್ದೇಶಕ ಸಂದೀಪ್ ಅವರು 399 ಪುಟಗಳ ಸುದೀರ್ಘ ಆದೇಶವನ್ನು ಹೊರಡಿಸಿದ್ದು, ದಂಡದ ವಿವರ ಹಾಗೂ ಅಧಿಕೃತ ಆದೇಶದ ಪ್ರತಿಯನ್ನು ನಟಿಗೆ ಕಳುಹಿಸಲಾಗಿದೆ.
ಕಂದಾಯ ಗುಪ್ತಚರ ನಿರ್ದೇಶನಾಲಯ (DRI) ಮತ್ತು ಕಸ್ಟಮ್ಸ್ ಇಲಾಖೆಯ ತನಿಖೆಯ ಪ್ರಕಾರ, ಮಾರ್ಚ್ 7, 2024 ಮತ್ತು ಫೆಬ್ರವರಿ 2, 2025ರ ನಡುವಿನ ಕೇವಲ ಒಂದು ವರ್ಷದ ಅವಧಿಯಲ್ಲಿ ದುಬೈನಿಂದ ಭಾರತಕ್ಕೆ ಅಕ್ರಮವಾಗಿ ಬರೋಬ್ಬರಿ 113 ಕೆ.ಜಿ. ಚಿನ್ನವನ್ನು ಸಾಗಾಟ ಮಾಡಿರುವುದು ತನಿಖೆಯಲ್ಲಿ ಸ್ಪಷ್ಟವಾಗಿ ಸಾಬೀತಾಗಿದೆ.
ದುಬೈನಿಂದ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಅಕ್ರಮವಾಗಿ ಚಿನ್ನ ಸಾಗಿಸಲು ಯತ್ನಿಸಿದ ಈ ಕೃತ್ಯದಲ್ಲಿ ನಟಿ ರನ್ಯಾ ರಾವ್ ಅಂತರರಾಷ್ಟ್ರೀಯ ಜಾಲದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವುದನ್ನು ಕಸ್ಟಮ್ಸ್ ಅಧಿಕಾರಿಗಳು ಸಾಕ್ಷ್ಯ ಸಮೇತ ಸಾಬೀತುಪಡಿಸಿದ್ದಾರೆ.
ನಟಿ ರನ್ಯಾ ರಾವ್ ತನ್ನ ಸಹ ಆರೋಪಿಗಳಾದ ತರುಣ್ ಸೇರಿದಂತೆ ಇತರ ಮೂವರ ಜೊತೆಗೂಡಿ ಈ ಬೃಹತ್ ಚಿನ್ನದ ಕಳ್ಳಸಾಗಣೆ ವಹಿವಾಟು ನಡೆಸುತ್ತಿರುವುದು ಬಯಲಾಗಿದೆ.
ಈ ಹಿಂದೆ ಡಿಆರ್‌ಐ ಅಧಿಕಾರಿಗಳು ನಟಿ ರನ್ಯಾ ರಾವ್ ಅವರ ಮನೆ ಮೇಲೆ ದಾಳಿ ನಡೆಸಿದ ಸಂದರ್ಭದಲ್ಲಿ 2.5 ಕೋಟಿ ರೂ. ನಗದು ಹಾಗೂ 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳು ಪತ್ತೆಯಾಗಿದ್ದವು.




























