ಹಂಸಲೇಖ ವಿರುದ್ಧ ದಾಖಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ
ಬೆಂಗಳೂರು: ಸಾಮಾಜಿಕ ಅನಿಷ್ಠ ಪದ್ಧತಿಗಳ ವಿರುದ್ಧ ಸಂಗೀತ ನಿರ್ದೇಶಕ ಹಂಸಲೇಖ ಅವರು ನೀಡಿರುವ ಹೇಳಿಕೆಯನ್ನಿಟ್ಟುಕೊಂಡು, ಪೇಜಾವರ ಶ್ರೀಗಳ ಅವಹೇಳನ ಮಾಡಿದ್ದಾರೆಂಬ ಬಗ್ಗೆ ಹಂಸಲೇಖ ಅವರ ವಿರುದ್ಧ ದಾಖಲಿಸಲಾಗಿದ್ದ ಪ್ರಕರಣದ ತನಿಖೆಗೆ ಹೈಕೋರ್ಟ್ ತಡೆ ನೀಡಿದೆ.
ಬೆಂಗಳೂರಿನ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಹಂಸಲೇಖ ವಿರುದ್ಧ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ರದ್ದು ಮಾಡುವಂತೆ ಹಂಸಲೇಖ ಅವರು ಸಲ್ಲಿಸಿದ್ದ ರಿಟ್ ಅರ್ಜಿಯನ್ನು ವಿಚಾರಣೆ ನಡೆಸಿದ ನ್ಯಾಯಪೀಠ ತನಿಖೆಗೆ ತಡೆ ನೀಡಿ ಆದೇಶಿಸಿದೆ.
ಹಂಸಲೇಖ ಅವರ ಪರ ವಕೀಲರಾದ ಕಾಶೀನಾಥ್ ಮತ್ತು ಸಿ.ಎಸ್.ದ್ವಾರಕಾನಾಥ್ ಹೈಕೋರ್ಟ್ ನಲ್ಲಿ ವಾದ ಮಂಡಿಸಿದರು.
ದಲಿತರ ಕೇರಿಗೆ ಬಲಿತರು ಹೋಗುವುದು ಏನು ಮಹಾ ಎಂದು ಪ್ರಶ್ನಿಸಿದ್ದ ಹಂಸಲೇಖ, ಪೇಜಾವರ ಶ್ರೀಗಳು ದಲಿತರ ಕೇರಿಗೆ ಹೋಗಿ ಕುಳಿತುಕೊಳ್ಳಬಹುದು, ಅವರು ಕೋಳಿ ಕೊಟ್ಟರೆ ತಿನ್ನಕ್ಕಾಗುತ್ತಾ? ಕುರಿಯ ರಕ್ತ ಫ್ರೈ ಮಾಡಿಕೊಟ್ಟರೆ ತಿನ್ನಕ್ಕಾಗುತ್ತಾ? ಎಂದು ಪ್ರಶ್ನಿಸಿದ್ದರು. ಈ ಹೇಳಿಕೆ ನೀಡಿದ ಬಳಿಕ ಗುಂಪೊಂದು ಅವರ ವಿರುದ್ಧ ಪ್ರತಿಭಟನೆ ನಡೆಸಿತ್ತು. ಇದಕ್ಕೆ ಪ್ರತಿಯಾಗಿ ಹಂಸಲೇಖ ಪರವಾಗಿ ರಾಜ್ಯಾದ್ಯಂತ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು.
ಈ ಹೇಳಿಕೆ ನೀಡಿದ ಬಳಿಕ ಕೆಲವರ ಭಾವನೆಗಳಿಗೆ ನೋವುಂಟಾಗಿರಬಹುದು ಎಂದು ಹಂಸಲೇಖ ಅವರು ವಿನಮ್ರವಾಗಿ ಕ್ಷಮೆಯಾಚಿಸಿದ್ದರು. ಆದರೂ ಅವರ ವಿರುದ್ಧ ಧ್ವೇಷಕಾರುವಂತಹ ಘಟನೆಗಳು ನಡೆದಾಗ ಇದನ್ನು ವಿರೋಧಿಸಿ ನೂರಾರು ಸಂಘಟನೆಗಳು ಬೀದಿಗಿಳಿದು ಹಂಸಲೇಖ ಅವರಿಗೆ ಬೆಂಬಲ ಸೂಚಿಸಿದ್ದವು.

























