ಹರೀಶ್ ಪೂಂಜಾ ರಾಜಕೀಯದಲ್ಲಿ ಬಚ್ಚಾ!: ಕಲೆಕ್ಷನ್ ಮಾಸ್ಟರ್ ಹೇಳಿಕೆಗೆ ಸಿಎಂ ಸಿದ್ದರಾಮಯ್ಯ ತಿರುಗೇಟು

ಮಂಗಳೂರು: ಹರೀಶ್ ಪೂಂಜಾ ಶಾಸಕನಾಗಿರೋದು ಮೊನ್ನೆ, ಇವರು ಪಾಪ ಇನ್ನೂ ರಾಜಕೀಯದಲ್ಲಿ ಬಚ್ಚಾ, ನಾನು 83ರಿಂದ ಶಾಸಕನಾಗಿ, 85ರಲ್ಲೇ ಮಿನಿಸ್ಟರ್ ಆಗಿದ್ದವನು ಎಂದು ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ವಿರುದ್ಧ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದರು.
ಸಿದ್ದರಾಮಯ್ಯ ಬಗ್ಗೆ ಹರೀಶ್ ಪೂಂಜಾ ಪೇಜ್ ನಲ್ಲಿ ಕಲೆಕ್ಷನ್ ಮಾಸ್ಟರ್ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಿದ ಸಿದ್ದರಾಮಯ್ಯ, ಅವರು ಹಿಂದಿನ ಬಿಜೆಪಿ ಸರ್ಕಾರ ಮತ್ತು ಬಿಜೆಪಿ ಮುಖ್ಯಮಂತ್ರಿಗಳಿಗೆ ಇದನ್ನು ಹೇಳಲಿ ಎಂದು ತಿರುಗೇಟು ನೀಡಿದರು.
50 ಕೋಟಿ ಆಫರ್ ಬಗ್ಗೆ ನನಗೆ ಗೊತ್ತಿಲ್ಲ, ರವಿ ಹತ್ತಿರ ಕೇಳಿ, ಯಾರು ಹೇಳಿದ್ರೋ ಅವರತ್ರ ಕೇಳಿ, ನನಗೆ ಯಾವುದೇ ಮಾಹಿತಿ ಬಂದಿಲ್ಲ, ಬಿಜೆಪಿಯವರು ನಮ್ಮ ಸರ್ಕಾರ ಅಸ್ಥಿರ ಮಾಡಲು ಪ್ರಯತ್ನಿಸ್ತಾ ಇದಾರೆ ಅನ್ನೋ ಮಾಹಿತಿ ಇದೆ. 50 ಕೋಟಿ ಕೊಟ್ಟು ಅಧಿಕಾರ ಆಫರ್ ಮಾಡ್ತಾ ಇದಾರೆ ಅನ್ನೋ ಮಾಹಿತಿ ಇಲ್ಲ ಎಂದರು.
ಪರಮೇಶ್ವರ್ ಊಟಕ್ಕೆ ಕರೆದಿದ್ರು, ಹೋಗಿದೀವಿ, ಅದಕ್ಕೆ ಮಸಾಲೆ ಯಾಕೆ ಹಾಕ್ತೀರಾ? ಅವರು ನನಗೆ, ಮಹಾದೇವಪ್ಪ, ಸತೀಶ್ ಜಾರಕಿಹೊಳಿಗೆ ಊಟಕ್ಕೆ ಕರೆದಿದ್ದರು. ಅಲ್ಲಿ ಯಾವುದೇ ರಾಜಕೀಯ ಇಲ್ಲ, ಅದೆಲ್ಲಾ ಸುಳ್ಳು, ಬಣ್ಣ ಕಟ್ಟಲಾಗ್ತಿದೆ ಎಂದು ಪರಮೇಶ್ವರ್ ಮನೆಗೆ ಭೇಟಿ ನೀಡಿರುವ ವಿಚಾರಕ್ಕೆ ಸಂಬಂಧಿಸಿದಂತೆ ಸಿಎಂ ಪ್ರತಿಕ್ರಿಯಿಸಿದರು.
ನಿಗಮ ಮಂಡಳಿ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಮೊದಲ ಹಂತದಲ್ಲಿ ಕೆಲ ಶಾಸಕರಿಗೆ ನಿಗಮ ಮಂಡಳಿ ಕೊಡ್ತೇವೆ. ಎರಡನೇ ಹಂತದಲ್ಲಿ ಕಾರ್ಯಕರ್ತರು, ನಾಯಕರಿಗೆ ಶೀಘ್ರವಾಗಿ ಹಂಚಿಕೆ ಮಾಡ್ತೀವಿ ಎಂದರು.
ಬರ ಪರಿಹಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಅವರು, ನಾವು ಬರ ಪರಿಹಾರ 7,900 ಕೋಟಿ ಕೇಳಿದ್ದೇವೆ, ಆದರೆ ಕೇಂದ್ರ ಸರ್ಕಾರ ಒಂದು ರೂ. ಪರಿಹಾರ ಕೊಟ್ಟಿಲ್ಲ, ಕೇಂದ್ರ ಸರ್ಕಾರ ಕರ್ನಾಟಕದ ಬಗ್ಗೆ ಮಲತಾಯಿ ಧೋರಣೆ ಹೊಂದಿದೆ ಎಂದರು.
ಇನ್ನೂ ಕಾರ್ಕಳದಲ್ಲಿ ಪರಶುರಾಮ ಮೂರ್ತಿ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾರ್ಕಳ ಪರಶುರಾಮ ಮೂರ್ತಿ ಅಸಲಿನಾ? ನಕಲಿನಾ ತನಿಖೆ ಆಗಲಿದೆ ಎಂದು ತಿಳಿಸಿದರು.
ವಿಡಿಯೋ ನೋಡಿ: