ಕೊನೆಗೂ ಸಿಕ್ಕಿ ಬಿದ್ದ ಬೈಕ್ ಸವಾರರಿಗೆ ತಲೆನೋವಾಗಿದ್ದ ಹೆಲ್ಮೆಟ್ ಕಳ್ಳ!

helmet thief
31/01/2024

ಉಪ್ಪಿನಂಗಡಿ: ಬೈಕ್ ನಲ್ಲಿ ತೂಗು ಹಾಕಿರುವ  ಹೆಲ್ಮೆಟ್ ಕದಿಯುತ್ತಿದ್ದ ಕಳ್ಳ ದ್ವಿಚಕ್ರ ವಾಹನ ಸವಾರರು ಹಾಗೂ ಪೊಲೀಸರಿಗೆ ಸವಾಲಾಗಿದ್ದ, ಇದೀಗ ಹೆಲ್ಮೆಟ್ ಕಳ್ಳ ಕೊನೆಗೂ ಪೊಲೀಸರ ಬಲೆಗೆ ಬಿದ್ದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಲ್ಲಿ ನಡೆದಿದೆ.

ಜನವರಿ 26ರಂದು  ಬ್ಯಾಂಕ್ ಶೆಡ್ ನಲ್ಲಿ ನಿಲ್ಲಿಸಿದ್ದ ಬೈಕ್ ನಲ್ಲಿದ್ದ ಹೆಲ್ಮೆಟ್ ನ್ನು ಕಳವು ಮಾಡಿರುವ ಬಗ್ಗೆ ಸಹಕಾರಿ ವ್ಯವಸಾಯಿಕ ಸಂಘದ ಸಿಬ್ಬಂದಿ ದೇವರಾಜ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ನಿಲ್ಲಿಸಿದ್ದ ಬೈಕ್ ನಲ್ಲಿದ್ದ ಹೆಲ್ಮೆಟ್ ನ್ನು ಬೈಕ್ ನಲ್ಲಿ ಬಂದಿದ್ದ ವ್ಯಕ್ತಿಯೋರ್ವ ಕಳವು ಮಾಡಿರುವ ಬಗ್ಗೆ ಸಂಶಯ ವ್ಯಕ್ತವಾಗಿತ್ತು. ಈ ಬಗ್ಗೆ ಸಿಸಿ ಕ್ಯಾಮರಾದಲ್ಲೂ ದೃಶ್ಯ ಸೆರೆಯಾಗಿತ್ತು.

ಹೆಲ್ಮೆಟ್ ಕಳವು ಮಾಡಿದ ಬಗ್ಗೆ ದೂರು ನೀಡಿದ್ದರೂ ಲೆಕ್ಕಿಸದ ಕಳ್ಳ ಜನವರಿ 29ರಂದು ಮತ್ತೆ ಹೆಲ್ಮೆಟ್ ಕಳವಿಗೆ  ಯತ್ನಿಸಿದ್ದು, ಈ ವೇಳೆ ಬ್ಯಾಂಕ್ ಸಿಬ್ಬಂದಿ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆನ್ನಲಾಗಿದೆ.

ಆರಂಭದಲ್ಲಿ ಹೆಲ್ಮೆಟ್ ಕಳವು ಮಾಡಿಲ್ಲ ಎಂದು ವಾದಿಸಿದ್ದ ಕಳ್ಳ, ಕೊನೆಗೆ ತಾನು ಕಳವು ಮಾಡಿದ್ದ 9 ಹೆಲ್ಮೆಟ್ ಗಳನ್ನು ಪೊಲೀಸರಿಗೆ ಒಪ್ಪಿಸಿದ್ದಾನೆ ಎಂದು ತಿಳಿದು ಬಂದಿದೆ.

ಆರೋಪಿಯು ಹೆಲ್ಮೆಟ್ ಕದಿಯುವುದನ್ನೇ ನಿತ್ಯ ಕಾಯಕ ಮಾಡಿಕೊಂಡಿದ್ದು, ಕದ್ದ ಹೆಲ್ಮೆಟ್ ಗಳನ್ನು ಹೆಲ್ಮೆಟ್ ವ್ಯಾಪಾರಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ.

ಸಾಕಷ್ಟು ಜನರು ಹೆಲ್ಮೆಟ್ ಕಳವಾದರೂ ಅದರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳೋದಿಲ್ಲ. ಆದ್ರೆ ದೇವರಾಜ್ ಎಂಬವರು ನೀಡಿದ ದೂರಿನಿಂದಾಗಿ ಹೆಲ್ಮೆಟ್ ಕಳವು ಪ್ರಕರಣವೊಂದು ಇದೀಗ ಬೆಳಕಿಗೆ ಬಂದಿದೆ.

ಇತ್ತೀಚಿನ ಸುದ್ದಿ

Exit mobile version