1:25 AM Thursday 15 - January 2026

ಹೆಣ್ಣೇ ಸಿಗುತ್ತಿಲ್ಲ ಎಂದವನಿಗೆ ಈಗ ಯಾರನ್ನು ಆಯ್ಕೆ ಮಾಡಬೇಕು ಅನ್ನೋದೇ ತಲೆನೋವು!

ajeem mansuri
31/03/2021

ಲಕ್ನೋ: ತನಗೆ ಯಾರೂ ಹೆಣ್ಣು ಕೊಡುತ್ತಿಲ್ಲ. ನನಗೆ ನೀವೇ ಮದುವೆ ಮಾಡಿಸಬೇಕು ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದ 2 ಅಡಿ ಮೂರು ಇಂಚು ಉದ್ದದ ಅಜೀಮ್ ಮನ್ಸೂರಿಗೆ ಇದೀಗ ಬೇರೆ ರೀತಿಯದ್ದೇ ತಲೆನೋವು ಆರಂಭವಾಗಿದೆ.

ತನಗೊಂದು ಹುಡುಗಿ ಹುಡುಕಿಕೊಡಿ ಎಂದು ಕಂಡಕಂಡವರಲ್ಲಿ ಬೇಡಿ ಕಂಗಾಲಾಗಿದ್ದ ಅಜೀಮ್, ಆ ಬಳಿಕ ಪೊಲೀಸರ ಮೊರೆ ಹೋಗಿದ್ದ. ಈತನ ಕಥೆ ದೇಶವಿಡೀ ವೈರಲ್ ಆಗಿದ್ದು, ಇದೀಗ ಅಜೀಮ್ ನನ್ನು ಮದುವೆಯಾಗಲು ಯುವತಿಯರು ಕ್ಯೂ ನಿಂತಿದ್ದು, ಯಾರನ್ನು ಮದುವೆಯಾಗಬೇಕು ಎನ್ನುವುದೇ ತಿಳಿಯದೇ ಅಜೀಮ್ ಮನ್ಸೂರಿ ಕಂಗಾಲಾಗಿದ್ದಾನೆ.

ಗಾಜಿಯಾಬಾದ್, ಬುಲಂದ್ ಶಹದ್, ದೆಹಲಿ, ಬಿಹಾರ ಸೇರಿದಂತೆ ವಿವಿಧ ಪ್ರದೇಶಗಳಿಂದ ಅಜೀಮ್ ನನ್ನು ಮದುವೆಯಾಗಲು ಯುವತಿಯರು ಮುಂದೆ ಬಂದಿದ್ದಾರೆ. ಈಗ ಯಾವ ಯುವತಿಯನ್ನು ಆರಿಸಬೇಕು ಎನ್ನುವ ಗೊಂದಲದಲ್ಲಿ ಅಜೀಮ್ ಸಿಲುಕಿದ್ದಾನೆ.

ನಿನಗೆ ಯಾರು ಇಷ್ಟವಾಗುತ್ತಾರೋ ಅವರನ್ನೇ ಆಯ್ಕೆ ಮಾಡು ಎಂದು ಹೇಳಿ ಮನೆಯವರು ಕೈತೊಳೆದುಕೊಂಡಿದ್ದಾರೆ. ಈ ನಡುವೆ ಅಜೀಮ್ ಗೆ ದೆಹಲಿಯ ಯುವತಿಯೋರ್ವಳು ವಿಡಿಯೋ ಸಂದೇಶ ಮೂಲಕ ತನ್ನನ್ನು ಮದುವೆಯಾಗುವಂತೆ ಪ್ರೇಮ ನಿವೇದನೆ ಮಾಡಿದ್ದು, ಅಜೀಮ್ ಗೆ ಈಕೆಯ ಮೇಲೆ ಲೈಟಾಗಿ ಮನಸ್ಸಾಗಿದೆ  ಎಂದು ಹೇಳಲಾಗಿದೆ.

ಒಂದು ಕಾಲದಲ್ಲಿ ಹುಡುಗಿಯರು ಕಣ್ಣೆತ್ತಿ ಕೂಡ ಅಜೀಮ್ ಮನ್ಸೂರಿಯನ್ನು ನೋಡುತ್ತಿರಲಿಲ್ಲ. ಇದೀಗ ಈತನನ್ನು ಮದುವೆಯಾಗಲು ಹುಡುಗಿಯರು ಕ್ಯೂ ನಿಂತಿದ್ದಾರೆ. ದೆಹಲಿಯ ಹುಡುಗಿಯ ಪ್ರೇಮ ನಿವೇದನೆಯಿಂದ ಅಜೀಮ್ ನ ಹೃದಯದಲ್ಲಿ ಕವಿತೆ ಚಿಗುರೊಡೆದಿದೆಯಂತೆ. ಇದೀಗ ಅಜೀಮ್ ಒಂದು ಹಾಡನ್ನು ಬರೆಯಲು ಕೂಡ ಸಿದ್ಧನಾಗಿದ್ದಾನೆ. ಒಂದು ಕಂಪ್ಲೈಂಟ್ ನಿಂದ ಇಷ್ಟೆಲ್ಲ ನಡೆದು ಹೋಯಿತೇ? ಎಂದು ಯುವಕರು ಮೂಗಿನ ಮೇಲೆ ಬೆರಳಿಡುವಂತೆ ಅಜೀಮ್ ಮಾಡಿದ್ದಾನೆ.

ಇದನ್ನೂ ಓದಿ:

ನನ್ನನ್ನು ಯಾರೂ ಒಪ್ಪುತ್ತಿಲ್ಲ, ನನಗೆ ಮದುವೆ ಮಾಡಿಸಿ | ಪೊಲೀಸರ ಮೊರೆ ಹೋದ ಯುವಕ

ಇತ್ತೀಚಿನ ಸುದ್ದಿ

Exit mobile version