12:49 AM Sunday 14 - December 2025

ಹೋಳಿ ಹಬ್ಬ ಹಿನ್ನೆಲೆ: ಅಯೋಧ್ಯೆಯಲ್ಲಿ ಮಧ್ಯಾಹ್ನ 2 ಗಂಟೆ ನಂತರ ಶುಕ್ರವಾರ ಜುಮಾ ನಮಾಝ್

12/03/2025

ಈ ವಾರ ಹೋಳಿ ಆಚರಣೆ ಇರುವುದರಿಂದ ಅಯೋಧ್ಯೆಯಾದ್ಯಂತ ಶುಕ್ರವಾರ ಜುಮಾ ಪ್ರಾರ್ಥನೆ 2 ಗಂಟೆಯ ಬಳಿಕ ನಡೆಸಲಾಗುವುದು ಎಂದು ಅಯೋಧ್ಯೆಯ ಮುಖ್ಯ ಧರ್ಮಗುರು ಮೊಹಮ್ಮದ್ ಹನೀಫ್ ಹೇಳಿದ್ದಾರೆ. ಮಾರ್ಚ್ 14ರಂದು ಹೋಳಿ ಹಾಗೂ ಜುಮಾ ಇರುವುದರಿಂದ ಉಭಯ ಆಚರಣೆಗಳು ಶಾಂತಿಯುತವಾಗಿ ನಡೆಯಲು ಮಾತುಕತೆ ನಡೆಸಲಾಗುತ್ತಿದೆ.

ಈ ವಾರದ ಜುಮಾ ಪ್ರಾರ್ಥನೆ ನಿರ್ವಹಿಸುವ ಸಮಯದ ಬಗ್ಗೆ ಅಯೋಧ್ಯೆಯ ಮುಖ್ಯ ಧರ್ಮಗುರು ಮೊಹಮ್ಮದ್ ಹನೀಫ್ ಬುಧವಾರ ಸೂಚನೆ ಹೊರಡಿಸಿದ್ದಾರೆ. ಇದು ಈ ವರ್ಷದ ರಂಜಾನ್‌ನ ಎರಡನೇ ಶುಕ್ರವಾರದ ಪ್ರಾರ್ಥನೆಯೂ ಹೌದು.

‘ಹೋಳಿ ಆಚರಣೆಗೆ ಅನುಗುಣವಾಗಿ ಜುಮಾ ಪ್ರಾರ್ಥನೆಯ ಸಮಯವನ್ನು ನಿಗದಿ‍ಪಡಿಸಲಾಗುವುದು. 2 ಗಂಟೆಯ ನಂತರ ಪ್ರಾರ್ಥನೆ ಇಟ್ಟುಕೊಳ್ಳಬೇಕು ಎಂದು ನಾವು ಎಲ್ಲಾ ಮಸೀದಿಗಳಿಗೆ ಸೂಚಿಸಿದ್ದೇವೆ. ಸಂಜೆ 4.30ರವರಗೆ ಜುಮಾ ನಮಾಜ್ ನಿರ್ವಹಿಸಲು ಅವಕಾಶ ಇದೆ’ ಎಂದು ಅಯೋಧ್ಯೆಯ ಕೇಂದ್ರ ಮಸೀದಿ ‘ಮಸ್ಜಿದ್ ಸರಾರಿಯ’ ಅಧ್ಯಕ್ಷರೂ ಆಗಿರುವ ಮೊಹಮಮ್ಮದ್ ಹನೀಫ್ ಹೇಳಿದ್ದಾರೆ.‌

‘ಹೋಳಿ ಸಂದರ್ಭದಲ್ಲಿ ಎಲ್ಲರೂ ಶಾಂತ ಹಾಗೂ ಉದಾರ ರೀತಿಯಲ್ಲಿ ವರ್ತಿಸಬೇಕು ಎಂದು ಮುಸಲ್ಮಾನರಲ್ಲಿ ನಾನು ಮನವಿ ಮಾಡಿದ್ದೇನೆ. ಯಾರಾದರೂ ಹೋಳಿಯ ಬಣ್ಣ ಹಚ್ಚಿದರೆ, ಅವರೊಂದಿಗೆ ಮುಗುಳ್ನಕ್ಕು, ಮತ್ತು ಪ್ರೀತಿ ಮತ್ತು ಗೌರವದ ಭಾವನೆಯಲ್ಲಿ ‘ಹೋಳಿ ಮುಬಾರಕ್’ ಎಂದು ಹಾರೈಸಿ’ ಎಂದು ಅವರು ಹೇಳಿದ್ದಾರೆ.

‘ಹೋಳಿ ಹಾಗೂ ಜುಮಾ ಒಂದೇ ದಿನ ಬಂದಿರುವುದು ಇದೇ ಮೊದಲಲ್ಲ. ಆಗಾಗ್ಗೆ ಬರುತ್ತಲೇ ಇರುತ್ತದೆ. ನಮ್ಮ ಏಕತೆಯನ್ನು ಗಟ್ಟಿಗೊಳಿಸಲು ನಮಗೆ ಇರುವ ಅವಕಾಶ ಇದು’ ಎಂದು ಹೇಳಿದ್ದಾರೆ. ಅಲ್ಲದೆ ಹಿಂದೂಗಳಿಗೆ ಹೋಳಿಯ ಶುಭಾಶಯವನ್ನೂ ತಿಳಿಸಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ

Exit mobile version