ಕೋಮು ಶಕ್ತಿಗಳ ನಿಗ್ರಹದ ಕುರಿತು ಗೃಹ ಸಚಿವರ ಹೇಳಿಕೆಯಲ್ಲಿ ವಿಶ್ವಾಸಾರ್ಹತೆಯ ಕೊರತೆ: ಸಿಪಿಐಎಂ

muneer katipalla
04/05/2025

ಮಂಗಳೂರು: ಕೋಮು ಹಿಂಸಾಚಾರದ ಘಟನೆಗಳ ಹಿನ್ನಲೆಯಲ್ಲಿ ಜಿಲ್ಲೆಗೆ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದ ತರುವಾಯ ಉಸ್ತುವಾರಿ ಸಚಿವರ ಸಮ್ಮುಖ ಗೃಹ ಸಚಿವ ಜಿ. ಪರಮೇಶ್ವರ್ ಕರಾವಳಿ ಜಿಲ್ಲೆಯಲ್ಲಿ ಕೋಮುಶಕ್ತಿಗಳ ನಿಗ್ರಹಕ್ಕೆ ಸರಕಾರ ಕೈಗೊಳ್ಳುವ ಕ್ರಮಗಳ ಕುರಿತು ನೀಡಿರುವ ಹೇಳಿಕೆ ವಿಶ್ವಾಸಾರ್ಹತೆಯ ಕೊರತೆಯನ್ನು ಹೊಂದಿದೆ ಎಂದು ಸಿಪಿಐಎಂ ದ.ಕ. ಜಿಲ್ಲಾ ಸಮಿತಿ ಹೇಳಿದೆ.

ನಕ್ಸಲ್ ನಿಗ್ರಹ ದಳದ ಮಾದರಿಯಲ್ಲಿ ‘ಕೋಮುವಾದಿ ವಿರೋಧಿ ಕಾರ್ಯ ಪಡೆ’ ಸ್ಥಾಪಿಸುವ ಕುರಿತು ಜಿ. ಪರಮೇಶ್ವರ್ ಹೇಳಿಕೆ ಪ್ರಾಯೋಗಿಕವಾಗಿ ಸಾಧ್ಯಗೊಳ್ಳುವುದು ಕಷ್ಟ ಸಾಧ್ಯ. ಇದು ನಕಾರಾತ್ಮಕ ಫಲಿತಾಂಶಕ್ಕೂ ಕಾರಣವಾಗುವ ಸಾಧ್ಯತೆ ಇದೆ.  ಕೋಮುವಾದ, ಕೋಮು ಶಕ್ತಿಗಳನ್ನು ನಿಗ್ರಹಿಸುವುದು ಪೊಲೀಸರಿಂದ ಮಾತ್ರ ಸಾಧ್ಯ ಆಗುವ ಸಂಗತಿ ಅಲ್ಲ. ಅದು ಬಹಳ ದೀರ್ಘಕಾಲದಿಂದ ಸಂಘಟನಾತ್ಮಕವಾಗಿ ಕಟ್ಟಿ ಬೆಳೆಸಿದ ಒಂದು ಸೈದ್ದಾಂತಿಕ ವ್ಯವಸ್ಥೆ‌. ಇದರ ವಿರುದ್ಧದ ಹೋರಾಟ ಅಂದರೆ, ಸಾಮಾಜಿಕ, ಸಾಂಸ್ಕೃತಿಕ, ರಾಜಕೀಯ ಕ್ಷೇತ್ರಗಳಲ್ಲಿ ಪರ್ಯಾಯ ಕಾರ್ಯಕ್ರಮಗಳನ್ನು ಇಟ್ಟು ಕೊಂಡು ದುಡಿಯುವುದು. ಕೋಮುವಾದಿ ಶಕ್ತಿಗಳ ಎದುರು ಸಣ್ಣ ಪುಟ್ಟ ಪ್ರತಿರೋಧಗಳಿಗೂ ಸಿದ್ದರಿಲ್ಲದ ಕಾಂಗ್ರೆಸ್ ಸರಕಾರ ಕೋಮುವಾದಿ ನಿಗ್ರಹ ಕಾರ್ಯಪಡೆ ಹೇಳಿಕೆಯನ್ನು ಕಾರ್ಯರೂಪಕ್ಕೆ ತರುವುದು ನಂಬಲು ಕಷ್ಟವಾಗುವ ಸಂಗತಿ. ಇದೇ ಗೃಹ ಸಚಿವರು ವರ್ಷದ ಹಿಂದೆ ರಚಿಸಿದ ಆ್ಯಂಟಿ ಮೋರಲ್ ಪೊಲೀಸ್ ವಿಂಗ್ ಕಾರ್ಯಾಚರಣೆಗೆ ಇಳಿಯುವ ಮುನ್ನವೆ ಅಸ್ಥಿತ್ವ ಕಳೆದು ಕೊಂಡಿರುವ ಅನುಭವ ಇರುವಾಗ ಸಚಿವರ ಮಾತು ಜನತೆಯಲ್ಲಿ ವಿಶ್ವಾಸ ಮೂಡಿಸುತ್ತಿಲ್ಲ,  ಕ್ರಿಮಿನಲ್ ಹಿನ್ನಲೆಯ ದ್ವೇಷ ಭಾಷಣಕಾರರು, ರೌಡಿಗಳ ಮೇಲೆ ಕ್ರಮ ಕೈಗೊಳ್ಳಲು ಸತತವಾಗಿ ಹಿಂಜರಿದ ಸರಕಾರ ಈಗ ಏಕಾಏಕಿ ದ್ವೇಷ ಭಾಷಣ ಮಾಡುವವರನ್ನು ಮುಲಾಜಿಲ್ಲದೆ ಹೆಡೆಮುರಿ ಕಟ್ಟುತ್ತೇವೆ ಎಂಬ ಮಾತು ಉತ್ತರ ಕುಮಾರನ ಪೌರುಷ ರೀತಿ ಕಾಣಿಸುತ್ತದೆ ಎಂದು ಸಿಪಿಐಎಂ ಹೇಳಿದೆ.

ಕೋಮುವಾದ ಅಳವಾಗಿ ಬೇರೂರಿರುವ ಕರಾವಳಿ ಜಿಲ್ಲೆಗಳ ಕುರಿತು ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ತಕ್ಷಣವೆ ಕೆಲವು ಕ್ರಮಗಳನ್ನು ತೆಗೆದುಕೊಳ್ಳಬೇಕಿತ್ತು. ಪೊಲೀಸ್ ಇಲಾಖೆ ಮಾತ್ರ ವಲ್ಲದೆ, ಶಿಕ್ಷಣ, ವಿವಿ, ಸೇರಿದಂತೆ ಎಲ್ಲಾ ಇಲಖೆಗಳಿಗೆ ಪ್ರಜ್ಞಾಪೂರ್ವಕ ನೇಮಕಾತಿ, ವಿಶೇಷ ಕಾರ್ಯಕ್ರಮಗಳನ್ನು ಯೋಜಿಸಬೇಕಿತ್ತು. ಆ ಕುರಿತು ಸಿಪಿಐಎಂ ಪಕ್ಷ ಹಾಗೂ ವಿವಿಧ ಜನ ಚಳವಳಿಗಳು ರಾಜ್ಯ ಸರಕಾರದ ಗಮನ ಸೆಳೆದಿತ್ತು. ಆದರೆ, ಈ ಕುರಿತು ಸಣ್ಣ ಕ್ರಮಗಳನ್ನೂ ಕೈಗೊಳ್ಳದೆ ಆನೆ ನಡೆದದ್ದೆ ದಾರಿ ಎಂಬಂತೆ  ವರ್ತಿಸಿದ ಕಾಂಗ್ರೆಸ್ ಸರಕಾರ ಹಾಗೂ ಅದರ ನಾಯಕತ್ವ ಈಗ ಖೆಡ್ಡಾಕ್ಕೆ ಉರುಳಿದೆ ಎಂದು ಸಿಪಿಐಎಂ ತಿಳಿಸಿದೆ. ಇಂತಹ ಸಂದರ್ಭದಲ್ಲಿ ಉಸ್ತುವಾರಿ ಹಾಗೂ ಗೃಹ ಸಚಿವರ ವೀರಾವೇಶದ ಮಾತುಗಳು ಯಾರಲ್ಲೂ ವಿಶ್ವಾಸ ಮೂಡಿಸುತ್ತಿಲ್ಲ ಎಂದು ಸಿಪಿಐಂ ದ.ಕ. ಜಿಲ್ಲಾ ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.

ಕುಡುಪು ಮಾಬ್ ಲಿಂಚಿಂಗ್ ಪ್ರಕರಣದ ಎಸ್ ಐಟಿ ತನಿಖೆ, ತಪ್ಪಿತಸ್ಥ ಪೊಲೀಸ್ ಕಮಿಷನರ್ ಮೇಲಿನ ಕ್ರಮಗಳನ್ನು ಜರುಗಿಸುವ ಕುರಿತು ಗೃಹ ಸಚಿವರು ಏನನ್ನೂ ಹೇಳದೆ, ತಿಪ್ಪೆ ಸಾರಿಸುವ ಮಾತುಗಳನ್ನಷ್ಟೆ ಆಡಿದ್ದಾರೆ ಎಂದು ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ ಕಾರ್ಯದರ್ಶಿ  ಮುನೀರ್ ಕಾಟಿಪಳ್ಳ   ನಿರಾಸೆ ವ್ಯಕ್ತಪಡಿಸಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version