ಇಲ್ಲೇ ನಿನ್ನ ಹೆಣ ಬೀಳತ್ತೆ: ಸಿಎಂ ತವರಿನಲ್ಲೇ ಮಹಿಳಾ ಅಧಿಕಾರಿಗೆ ಕೊಲೆ ಬೆದರಿಕೆ
ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ತವರು ಜಿಲ್ಲೆಯಾದ ಮೈಸೂರಿನಲ್ಲಿ ಕರ್ತವ್ಯ ನಿರತ ಮಹಿಳಾ ಅಧಿಕಾರಿಯೊಬ್ಬರಿಗೆ ಬಹಿರಂಗವಾಗಿ ಕೊಲೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. “ಇಲ್ಲೇ ನಿನ್ನ ಹೆಣ ಬೀಳತ್ತೆ” ಎಂದು ವ್ಯಕ್ತಿಯೊಬ್ಬ ಮಹಿಳಾ ಅಧಿಕಾರಿಯನ್ನು ಬೆದರಿಸುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಘಟನೆಯ ವಿವರ: ಮೈಸೂರಿನ ಗುಡಮಾದನಹಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮುಖ್ಯಮಂತ್ರಿಗಳ ಕನಸಿನ ಯೋಜನೆಯಾದ ‘ನಿಮ್ಹಾನ್ಸ್’ ಮಾದರಿಯ ಆಸ್ಪತ್ರೆ ನಿರ್ಮಾಣಕ್ಕಾಗಿ ಸುಮಾರು 20 ಎಕರೆ ಜಮೀನನ್ನು ಗುರುತಿಸಲಾಗಿದೆ. ಈ ಜಮೀನಿನ ಸರ್ವೆ ಮತ್ತು ಸ್ವಾಧೀನ ಪ್ರಕ್ರಿಯೆಯ ಹಿನ್ನೆಲೆಯಲ್ಲಿ ಬಂಡೀಪಾಳ್ಯ ವೃತ್ತದ ಗ್ರಾಮ ಆಡಳಿತಾಧಿಕಾರಿ (VA) ಜಿ. ಭವ್ಯಾ ಮತ್ತು ಗ್ರಾಮ ಸಹಾಯಕ ನವೀನ್ ಕುಮಾರ್ ಸ್ಥಳಕ್ಕೆ ತೆರಳಿದ್ದರು.
ಬೆದರಿಕೆ ಹಾಕಿದ್ದು ಯಾರು? ಸರ್ಕಾರಕ್ಕೆ ಸೇರಿದ ಜಮೀನಿನಲ್ಲಿ ಅನಧಿಕೃತವಾಗಿ ಅಡಕೆ ತೋಟ ನಿರ್ಮಿಸಿಕೊಂಡಿದ್ದ ಜಿ.ಎಂ. ಪುಟ್ಟಸ್ವಾಮಿ ಎಂಬಾತ ಅಧಿಕಾರಿಗಳ ಮೇಲೆರಗಿ ಬಂದಿದ್ದಾನೆ. “ಯಾರನ್ನು ಕೇಳಿ ನಿಮ್ಹಾನ್ಸ್ ಆಸ್ಪತ್ರೆಗೆ ಜಮೀನು ಮಂಜೂರು ಮಾಡಿದ್ದೀರಿ? ಮೊದಲು ತಹಶೀಲ್ದಾರ್ ತಲೆ ತೆಗೆಯಬೇಕು” ಎಂದು ಅಬ್ಬರಿಸಿದ್ದಲ್ಲದೆ, ಭವ್ಯಾ ಅವರಿಗೆ “ಇಲ್ಲೇ ನಿನ್ನ ಹೆಣ ಬೀಳುತ್ತೆ” ಎಂದು ನೇರವಾಗಿಯೇ ಕೊಲೆ ಬೆದರಿಕೆ ಹಾಕಿದ್ದಾನೆ.
ಅಷ್ಟೇ ಅಲ್ಲದೆ, ಘಟನೆಯನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸುತ್ತಿದ್ದಾಗ ಪುಟ್ಟಸ್ವಾಮಿ ಮೊಬೈಲ್ ಕಿತ್ತುಕೊಂಡು ವಿಡಿಯೋ ಡಿಲೀಟ್ ಮಾಡಲು ಯತ್ನಿಸಿದ್ದಾನೆ ಎಂದು ತಿಳಿದುಬಂದಿದೆ.
ಪೊಲೀಸ್ ದೂರು ದಾಖಲು: ತನ್ನ ಕರ್ತವ್ಯಕ್ಕೆ ಅಡ್ಡಿಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿ, ಪ್ರಾಣ ಬೆದರಿಕೆ ಹಾಕಿದ ಪುಟ್ಟಸ್ವಾಮಿ ವಿರುದ್ಧ ಅಧಿಕಾರಿ ಭವ್ಯಾ ಅವರು ಮೈಸೂರು ದಕ್ಷಿಣ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಎಫ್‌ಐಆರ್ (FIR) ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
ಚುನಾಯಿತ ಪ್ರತಿನಿಧಿಗಳು ಅಥವಾ ಅವರ ಬೆಂಬಲಿಗರು ಸಾರ್ವಜನಿಕ ಅಧಿಕಾರಿಗಳ ಮೇಲೆ ದರ್ಪ ತೋರುತ್ತಿರುವ ಸಾಲಿಗೆ ಈ ಘಟನೆಯೂ ಸೇರ್ಪಡೆಯಾಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD
























