ಕೋಪದ ಭರದಲ್ಲಿ ಮಗನ ಮೇಲೆಯೇ ಗುಂಡು ಹಾರಿಸಿ ಕೊಂದ ತಂದೆ!

26/01/2024
ಬೆಂಗಳೂರು: ವ್ಯಕ್ತಿಯೋರ್ವ ಸಿಟ್ಟಿನಿಂದ ತನ್ನ ಮಗನ ಮೇಲೆಯೇ ಗುಂಡಿನ ದಾಳಿ ನಡೆಸಿದ್ದು, ಪರಿಣಾಮವಾಗಿ ಗಂಭೀರವಾಗಿ ಗಾಯಗೊಂಡಿದ್ದ ಮಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟ ಘಟನೆ ನಡೆದಿದೆ.
ಬೆಂಗಳೂರಿನ ಕಾಮಾಕ್ಷಿಪಾಳ್ಯದ ಬಳಿ ಈ ಘಟನೆ ನಡೆದಿದೆ. ಕರೆಕಲ್ಮನೆ ನಿವಾಸಿ ನರ್ತನ್ ಬೋಪಣ್ಣ(32) ಮೃತಪಟ್ಟ ಯುವಕ ಎಂದು ತಿಳಿದು ಬಂದಿದೆ.
ಯಾವುದೋ ವಿಚಾರಕ್ಕೆ ಸಂಬಂಧಿಸಿದಂತೆ ತಂದೆ ಹಾಗೂ ಮಗನ ನಡುವೆ ಜಗಳ ಆರಂಭವಾಗಿದ್ದು, ಒಂದು ಹಂತದಲ್ಲಿ ಕೋಪದ ಭರದಲ್ಲಿ ತಂದೆ ಸುರೇಶ್ ಮಗನ ಮೇಲೆಯೇ ಗುಂಡು ಹಾರಿಸಿದ್ದಾರೆ.
ಗುಂಡಿನ ಸದ್ದು ಕೇಳಿ ನೆರೆಹೊರೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಪೊಲೀಸರು ಧಾವಿಸಿದ ವೇಳೆ ನರ್ತನ್ ರಕ್ಷದ ಮಡುವಿನಲ್ಲಿ ಬಿದ್ದಿದ್ದರು ಎನ್ನಲಾಗಿದೆ.
ತಕ್ಷಣವೇ ಆತನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅಲ್ಲಿ ನರ್ತನ್ ಕೊನೆಯುಸಿರೆಳೆದಿದ್ದಾರೆ. ಸದ್ಯ ತಂದೆ ಸುರೇಶ್ ನನ್ನು ವಶಕ್ಕೆ ಪಡೆದುಕೊಂಡಿರುವ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.