ಯುಎಸ್—ಇರಾನ್ – ಇಸ್ರೇಲ್ ಯುದ್ಧಕ್ಕೆ ಹೊಸ ತಿರುವು: ಅಯತೊಲ್ಲಾ ಅಲಿ ಖಾಮಿನೈ ಸಾವಿಗೆ ಭಾರತ ಸರ್ಕಾರ ಸಂತಾಪ

India condoles khameneis death
05/03/2026

ನವದೆಹಲಿ: ಇರಾನ್‌ ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಾಮಿನೈ ಅವರ ನಿಧನಕ್ಕೆ ಭಾರತ ಸರ್ಕಾರ ಅಧಿಕೃತವಾಗಿ ಸಂತಾಪ ಸೂಚಿಸಿದೆ. ಗುರುವಾರ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ದೆಹಲಿಯಲ್ಲಿರುವ ಇರಾನ್ ರಾಯಭಾರಿಯನ್ನು ಭೇಟಿ ಮಾಡಿ, ಖಾಮಿನೈ ಅವರ ನಿಧನದ ಹಿನ್ನೆಲೆಯಲ್ಲಿ ಇಡಲಾದ ಸಂತಾಪ ಸೂಚಕ ಪುಸ್ತಕಕ್ಕೆ ಸಹಿ ಹಾಕಿದರು.

ಕಳೆದ ಭಾನುವಾರ ಟೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯ ಬೆನ್ನಲ್ಲೇ ಖಾಮಿನೈ ನಿಧನರಾಗಿದ್ದರು. ಆರಂಭದಲ್ಲಿ ಈ ವಿಷಯದಲ್ಲಿ ಮೌನ ವಹಿಸಿದ್ದ ಭಾರತ ಸರ್ಕಾರ, ಇದೀಗ ಅಧಿಕೃತವಾಗಿ ಸಂತಾಪ ಸೂಚಿಸುವ ಮೂಲಕ ತನ್ನ ರಾಜತಾಂತ್ರಿಕ ನಿಲುವಿನಲ್ಲಿ ಮಹತ್ವದ ಬದಲಾವಣೆ ಮಾಡಿಕೊಂಡಿದೆ.

ವಿದೇಶಾಂಗ ಕಾರ್ಯದರ್ಶಿ ಭೇಟಿ: ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅವರು ಇರಾನ್ ರಾಯಭಾರಿಯನ್ನು ಭೇಟಿ ಮಾಡಿ ಭಾರತದ ಪರವಾಗಿ ಸಂತಾಪ ವ್ಯಕ್ತಪಡಿಸಿದರು.

ಖಾಮಿನೈ ಸಾವಿಗೆ ಕಾರಣವಾದ ವೈಮಾನಿಕ ದಾಳಿಯ ಬಗ್ಗೆ ಈವರೆಗೆ ಯಾವುದೇ ಹೇಳಿಕೆ ನೀಡದಿದ್ದಕ್ಕಾಗಿ ವಿರೋಧ ಪಕ್ಷಗಳು ಕೇಂದ್ರ ಸರ್ಕಾರವನ್ನು ತೀವ್ರವಾಗಿ ಟೀಕಿಸಿದ್ದವು. ಸೋನಿಯಾ ಗಾಂಧಿ ಸೇರಿದಂತೆ ಹಲವು ನಾಯಕರು ಸರ್ಕಾರದ ಮೌನವನ್ನು ಪ್ರಶ್ನಿಸಿದ್ದರು.

ಪ್ರಧಾನಿ ಮೋದಿ ಹೇಳಿಕೆ: ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ಉದ್ವಿಗ್ನತೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, “ಯಾವುದೇ ವಿವಾದಗಳನ್ನು ಮಾತುಕತೆ ಮತ್ತು ರಾಜತಾಂತ್ರಿಕತೆಯ ಮೂಲಕ ಬಗೆಹರಿಸಿಕೊಳ್ಳಬೇಕು ಎಂಬುದು ಭಾರತದ ಸದಾಕಾಲದ ನಿಲುವು” ಎಂದು ಹೇಳಿದ್ದಾರೆ.

ಅಮೆರಿಕ, ಇಸ್ರೇಲ್ ಮತ್ತು ಯುರೋಪಿಯನ್ ಒಕ್ಕೂಟದ ಹಡಗುಗಳನ್ನು ಹೊರತುಪಡಿಸಿ ಉಳಿದ ದೇಶಗಳ ಹಡಗುಗಳಿಗೆ ಹೋರ್ಮುಜ್ ಜಲಸಂಧಿಯನ್ನು ಮುಕ್ತವಾಗಿಡುವುದಾಗಿ ಇರಾನ್ ಘೋಷಿಸಿದ ಬೆನ್ನಲ್ಲೇ ಭಾರತದ ಈ ರಾಜತಾಂತ್ರಿಕ ನಡೆ ಕುತೂಹಲ ಮೂಡಿಸಿದೆ.

ರಷ್ಯಾ ಮತ್ತು ಚೀನಾ ಈಗಾಗಲೇ ಖಾಮಿನೈ ನಿಧನಕ್ಕೆ ಸಂತಾಪ ಸೂಚಿಸಿದ್ದು, ಇದೀಗ ಭಾರತವೂ ಆ ಸಾಲಿಗೆ ಸೇರ್ಪಡೆಯಾಗಿದೆ. ಇರಾನ್ ಭಾರತದ ಪ್ರಮುಖ ವ್ಯಾಪಾರ ಪಾಲುದಾರ ದೇಶವಾಗಿದ್ದು, ಈ ಬೆಳವಣಿಗೆಯು ಉಭಯ ದೇಶಗಳ ಸಂಬಂಧದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version