ಇನ್ ಸ್ಟಾಗ್ರಾಂ ಬೈಕ್ ರೈಡರ್ ನಿಂದ ಯುವತಿಯ ಮೇಲೆ ಅತ್ಯಾಚಾರ, ಬ್ಲ್ಯಾಕ್ ಮೇಲ್: ಆರೋಪಿ ಬಂಧನ

stop rape.jpg
02/08/2026

ಮಂಗಳೂರು: ಇನ್ಸ್ಟಾಗ್ರಾಂ ಮೂಲಕ ಪರಿಚಯವಾದ ಬೈಕ್ ರೈಡರೊಬ್ಬ ಯುವತಿಯ ಮೇಲೆ ಅತ್ಯಾಚಾರ ಎಸಗಿ, ಹಣ ಹಾಗೂ ಐಫೋನ್ ಪಡೆದು ಬ್ಲ್ಯಾಕ್ಮೇಲ್ ಮಾಡಿರುವ ಕ್ರೂರ ಘಟನೆ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಸಂತ್ರಸ್ತೆಯು ನೀಡಿದ ದೂರಿನನ್ವಯ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಉಡುಪಿ ಮೂಲದ 27 ವರ್ಷದ ಯುವತಿ ನೀಡಿದ ದೂರಿನ ಮೇರೆಗೆ, ಮರಕಡ ಬಜಪೆಯ ಬೈಕ್ ರೈಡರ್ ಕಾರ್ತಿಕ್ ಕರ್ಕೇರ ಎಂಬಾತನ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 64, 78, 351(2) ಹಾಗೂ 352ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

2026ರ ಫೆಬ್ರವರಿಯಲ್ಲಿ ಯುವತಿ ಒಮಾನ್ ನಲ್ಲಿ ಉದ್ಯೋಗದಲ್ಲಿದ್ದಾಗ ಇನ್ ಸ್ಟಾಗ್ರಾಂ ಮೂಲಕ ಕಾರ್ತಿಕ್ ಪರಿಚಯವಾಗಿದ್ದ. ಪ್ರೀತಿಸುವಂತೆ ಒತ್ತಾಯಿಸುತ್ತಿದ್ದ ಆತ, ಅರೆನಗ್ನ ಫೋಟೊ ಕೇಳಿದ್ದರಿಂದ ಯುವತಿ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರು. ಬಳಿಕ ವಿಷ ಸೇವಿಸಿ ಆಸ್ಪತ್ರೆಗೆ ದಾಖಲಾಗಿರುವುದಾಗಿ ಫೋಟೊ ಕಳುಹಿಸಿ, ಗಾಂಜಾ ಸೇವಿಸುವುದಾಗಿ ಹೇಳಿ ಭಯ ಹುಟ್ಟಿಸಿ ಮತ್ತೆ ಸಂಪರ್ಕಕ್ಕೆ ಬರುವಂತೆ ಮಾಡಿದ್ದ. ಯುವತಿ ಒಮಾನ್ ನಿಂದ ಮರಳಿದ ಬಳಿಕ, ಮೇ 10ರಂದು ಭೇಟಿಯಾಗಿದ್ದರು. ಅಂದು ರಾತ್ರಿ ಭಾರತ್ ಮಹಲ್ ಸಮೀಪ ಬೈಕ್ ಸೈಲೆನ್ಸರ್ ಶಬ್ದಕ್ಕಾಗಿ ಪೊಲೀಸರು ದಂಡ ವಿಧಿಸಿ ಬಿಡುವಷ್ಟರಲ್ಲಿ ತಡವಾಗಿದ್ದರಿಂದ, ಯುವತಿಯನ್ನು ಲಾಡ್ಜ್ ಗೆ ಕರೆದೊಯ್ದಿದ್ದ. ಅಲ್ಲಿ ಆಕೆಯ ಇಚ್ಛೆಗೆ ವಿರುದ್ಧವಾಗಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದೆ.

ಘಟನೆಯ ನಂತರ ಹಣಕ್ಕಾಗಿ ನಿರಂತರ ಕಿರುಕುಳ ನೀಡಿದ್ದಲ್ಲದೆ, ಮೇ 12ರಂದು ಆಕೆಯಿಂದ ಹೊಸ ಐಫೋನ್ ಸಹ ಪಡೆದುಕೊಂಡಿದ್ದ. ಯುವತಿಗೆ ಬೇರೆ ವಿವಾಹ ನಿಶ್ಚಯವಾದಾಗ, ಮದುವೆಯಾಗಲಿರುವ ಯುವಕನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಸಂದೇಶ ಕಳುಹಿಸಿದ್ದ. ಆತನಿಂದ ಐಫೋನ್ ವಾಪಸ್ ಪಡೆದರೂ ಅದರ ಪಾಸ್ವರ್ಡ್ ನೀಡದ ಕಾರಣ ಕರೆ ಮಾಡಿದಾಗ, ಕಾರ್ತಿಕ್ನ ಸೋದರ ಸಂಬಂಧಿ ಸುಚಿತ್ರಾ ಎಂಬಾಕೆ ಕರೆ ಸ್ವೀಕರಿಸಿ ಯುವತಿಗೆ ಜೀವ ಬೆದರಿಕೆ ಹಾಕಿದ್ದಾಳೆ. ಅಲ್ಲದೆ, ಕಾರ್ತಿಕ್ ಖಾಸಗಿ ಫೋಟೊ–ವಿಡಿಯೊಗಳನ್ನು ವಾಟ್ಸಾಪ್ಗೆ ಕಳುಹಿಸಿ, ಪತ್ರಿಕೆಯಲ್ಲಿ ಪ್ರಕಟಿಸುವುದಾಗಿ ಬೆದರಿಸಿದ್ದ ಎಂದು ಆರೋಪಿಸಲಾಗಿದೆ.

ತನಗೆ ಮತ್ತು ಮದುವೆಯಾಗಲಿರುವ ಯುವಕನಿಗೆ ಜೀವ ಬೆದರಿಕೆ ಇದೆ ಎಂದು ಯುವತಿ ನೀಡಿರುವ ದೂರಿನ ಆಧಾರದ ಮೇಲೆ ಕಾರ್ಯಾಚರಣೆ ನಡೆಸಿದ ಮಂಗಳೂರು ಮಹಿಳಾ ಠಾಣೆ ಪೊಲೀಸರು ಆರೋಪಿ ಕಾರ್ತಿಕ್ ನನ್ನು ಬಂಧಿಸಿ, ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version