ಯುದ್ಧ ನಿಲ್ಲಿಸಬೇಕಾದರೆ ಈ ಮೂರು ಷರತ್ತುಗಳನ್ನು ಒಪ್ಪಿಕೊಳ್ಳಿ: ಅಮೆರಿಕ ಮತ್ತು ಇಸ್ರೇಲ್ ಗೆ ಇರಾನ್ ತಾಕೀತು

iran sets 3 conditions
13/03/2026

ಟೆಹ್ರಾನ್: ಮಧ್ಯಪ್ರಾಚ್ಯದಲ್ಲಿ ಯುದ್ಧವು 13ನೇ ದಿನಕ್ಕೆ ಕಾಲಿಡುತ್ತಿರುವ ಬೆನ್ನಲ್ಲೇ, ಇಸ್ರೇಲ್ ಮತ್ತು ಅಮೆರಿಕ ಸಂಕಷ್ಟದಲ್ಲಿ ಸಿಲುಕಿದೆ. ಇರಾನ್ ನ್ನು ಸೋಲಿಸಿಯೇ ಬಿಟ್ಟೆವು ಎನ್ನುವ ಭ್ರಮೆಯಲ್ಲಿದ್ದ ಅಮೆರಿಕ ಹಾಗೂ ಇಸ್ರೇಲ್ ಇದೀಗ ಇರಾನ್ ನ ಮಾತಿನಂತೆ ನಡೆದುಕೊಳ್ಳಬೇಕಾದ ಸಂಕಷ್ಟದಲ್ಲಿ ಸಿಲುಕಿದೆ. ಯುದ್ಧವನ್ನು ನಿಲ್ಲಿಸಬೇಕೋ ಎನ್ನುವುದನ್ನು ನಿರ್ಧರಿಸುವುದು ಅಮೆರಿಕ ಅಲ್ಲ, ನಾವು ಎಂದು ಇರಾನ್ ಘೋಷಿಸಿದೆ. ಅಲ್ಲದೇ ಯುದ್ಧವನ್ನು ನಾವು ನಿಲ್ಲಿಸಬೇಕಾದರೆ,  ಮೂರು ಮುಖ್ಯ ಷರತ್ತುಗಳನ್ನು ಪಾಲಿಸಬೇಕು ಅಂತ ಇಸ್ರೇಲ್ ಮತ್ತು ಅಮೆರಿಕಕ್ಕೆ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ತಾಕೀತು ಮಾಡಿದ್ದಾರೆ.

ರಷ್ಯಾ ಮತ್ತು ಪಾಕಿಸ್ತಾನದ ನಾಯಕರೊಂದಿಗೆ ಮಾತುಕತೆ ನಡೆಸುವ ಮೂಲಕ ಶಾಂತಿಗಾಗಿ ತಮ್ಮ ದೇಶದ ಬದ್ಧತೆಯನ್ನು ಪುನರುಚ್ಚರಿಸಿದ್ದಾರೆ.

ಇರಾನ್ ದೇಶಕ್ಕಿರುವ ಹಕ್ಕುಗಳನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಅಧಿಕೃತವಾಗಿ ಒಪ್ಪಿಕೊಳ್ಳಬೇಕು. ಯುದ್ಧದಿಂದ ಉಂಟಾದ ಹಾನಿಗೆ ಪ್ರತಿಯಾಗಿ ಪರಿಹಾರ ಧನವನ್ನು (Reparations) ನೀಡಬೇಕು. ಮುಂದಿನ ದಿನಗಳಲ್ಲಿ ಇರಾನ್ ಮೇಲೆ ಯಾವುದೇ ರೀತಿಯ ಆಕ್ರಮಣ ನಡೆಯುವುದಿಲ್ಲ ಎಂಬುದಕ್ಕೆ ದೃಢವಾದ ಅಂತರಾಷ್ಟ್ರೀಯ ಖಾತರಿಗಳನ್ನು ನೀಡಬೇಕು. ಜಿಯೋನಿಸ್ಟ್ ಆಡಳಿತ (ಇಸ್ರೇಲ್) ಮತ್ತು ಅಮೆರಿಕದಿಂದ ಹೊತ್ತಿಕೊಂಡಿರುವ ಈ ಯುದ್ಧವನ್ನು ಕೊನೆಗಾಣಿಸಲು ಇವುಗಳೇ ಏಕೈಕ ಮಾರ್ಗಗಳಾಗಿವೆ” ಎಂದು ಅಧ್ಯಕ್ಷ ಪೆಜೆಶ್ಕಿಯಾನ್ ಹೇಳಿದ್ದಾರೆ.

ಫೆಬ್ರವರಿ 28 ರಂದು ಅಮೆರಿಕ ಮತ್ತು ಇಸ್ರೇಲ್ ಇರಾನ್ ಮೇಲೆ ಜಂಟಿ ವೈಮಾನಿಕ ದಾಳಿ ನಡೆಸಿದ ನಂತರ ಈ ಸಂಘರ್ಷ ಆರಂಭವಾಗಿತ್ತು. ಈವರೆಗೆ ನಡೆದ ಭೀಕರ ದಾಳಿಗಳಲ್ಲಿ ಸುಮಾರು 1,200ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ. ಮತ್ತೊಂದೆಡೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು “ನಾವು ಈಗಾಗಲೇ ಇರಾನ್ ವಿರುದ್ಧ ಯುದ್ಧ ಗೆದ್ದಿದ್ದೇವೆ” ಎಂದು ಹೇಳಿಕೆ ನೀಡಿದ್ದರೂ, ಕಾರ್ಯಾಚರಣೆ ಪೂರ್ಣಗೊಳ್ಳುವವರೆಗೆ ಅಮೆರಿಕದ ಸೈನಿಕರು ಅಲ್ಲಿಯೇ ಇರಲಿದ್ದಾರೆ ಎಂದು ತಿಳಿಸಿದ್ದಾರೆ.

ಈ ಯುದ್ಧದ ಪರಿಣಾಮವಾಗಿ ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟಿರುವುದರಿಂದ ಜಾಗತಿಕವಾಗಿ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಕಚ್ಚಾ ತೈಲ ಬೆಲೆ ಗಗನಕ್ಕೇರಿದೆ. ಈ ಸಂಘರ್ಷದ ನಡುವೆಯೂ ಭಾರತವು ರಷ್ಯಾದಿಂದ ತೈಲ ಆಮದನ್ನು ಗಣನೀಯವಾಗಿ ಹೆಚ್ಚಿಸಿಕೊಂಡಿದೆ ಎಂದು ವರದಿಗಳು ತಿಳಿಸಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version