“ಮಕ್ಕಳ ಕೊಲೆಗಾರ” ನೆತನ್ಯಾಹುನನ್ನು ಬೆನ್ನಟ್ಟಿ ಕೊಲ್ಲುತ್ತೇವೆ:  ಇರಾನ್ ನಿಂದ ನೇರ ಬೆದರಿಕೆ

netanyahu
15/03/2026

ತೆಹ್ರಾನ್: ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ತಾರಕಕ್ಕೇರಿರುವ ನಡುವೆಯೇ, ಇರಾನ್‌ನ ಪ್ರಭಾವಿ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC) ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರಿಗೆ ನೇರ ಜೀವಬೆದರಿಕೆ ಹಾಕಿದೆ. ನೆತನ್ಯಾಹು ಅವರನ್ನು “ಮಕ್ಕಳನ್ನು ಕೊಲ್ಲುವ ಅಪರಾಧಿ” ಎಂದು ಕರೆದಿರುವ ಪಡೆಗಳು, ಅವರು ಎಲ್ಲಿದ್ದರೂ ಬೆನ್ನಟ್ಟಿ ಹತ್ಯೆ ಮಾಡುವುದಾಗಿ ಘೋಷಿಸಿವೆ.

“ಒಂದು ವೇಳೆ ಈ ಮಕ್ಕಳನ್ನು ಕೊಲ್ಲುವ ಅಪರಾಧಿ (ನೆತನ್ಯಾಹು) ಜೀವಂತವಾಗಿದ್ದರೆ, ನಾವು ಪೂರ್ಣ ಶಕ್ತಿಯೊಂದಿಗೆ ಅವರನ್ನು ಬೆನ್ನಟ್ಟುವುದನ್ನು ಮತ್ತು ಹತ್ಯೆ ಮಾಡುವುದನ್ನು ಮುಂದುವರಿಸುತ್ತೇವೆ” ಎಂದು IRGC ತನ್ನ ಅಧಿಕೃತ ವೆಬ್‌ಸೈಟ್ ‘ಸೆಪಾ ನ್ಯೂಸ್’ನಲ್ಲಿ ಪ್ರಕಟಿಸಿದೆ.

ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ನೆತನ್ಯಾಹು ಹತ್ಯೆಯಾಗಿದ್ದಾರೆ ಎಂಬ ವದಂತಿಗಳು ಹರಡಿದ್ದವು. ಈ ಹಿನ್ನೆಲೆಯಲ್ಲಿ ಇಸ್ರೇಲ್ ಪ್ರಧಾನಿ ಕಚೇರಿಯು “ಪ್ರಧಾನಿಗಳು ಕ್ಷೇಮವಾಗಿದ್ದಾರೆ, ಇದೆಲ್ಲಾ ಸುಳ್ಳು ಸುದ್ದಿ” ಎಂದು ಸ್ಪಷ್ಟನೆ ನೀಡಿದ ಬೆನ್ನಲ್ಲೇ ಇರಾನ್ ಈ ಹೇಳಿಕೆ ಬಿಡುಗಡೆ ಮಾಡಿದೆ.

ಫೆಬ್ರವರಿ 28 ರಂದು ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ಭೀಕರ ವೈಮಾನಿಕ ದಾಳಿಯಲ್ಲಿ ಇರಾನ್‌ನ ಅಂದಿನ ಪರಮೋಚ್ಚ ನಾಯಕ ಅಲಿ ಖಮೇನಿ ಕೊಲ್ಲಲ್ಪಟ್ಟಿದ್ದರು. ಈ ದಾಳಿಯಲ್ಲಿ ಅವರ ಮೊಮ್ಮಗಳು ಕೂಡ ಮೃತಪಟ್ಟಿದ್ದಳು. ಇನ್ನೊಂದೆಡೆ ಇರಾನ್ ಶಾಲೆಯೊಂದರ ಮೇಲೆ ನಡೆಸಿದ ದಾಳಿಯಲ್ಲಿ ಶಾಲಾ ಮಕ್ಕಳು ಪ್ರಾಣ ಕಳೆದುಕೊಂಡಿದ್ದರು. ಇದೇ ಕಾರಣಕ್ಕೆ ಇರಾನ್ ಪಡೆಗಳು ನೆತನ್ಯಾಹು ಅವರನ್ನು “ಮಕ್ಕಳ ಹಂತಕ” ಎಂದು ಕರೆದಿದೆ.

ಇತ್ತ ಇಸ್ರೇಲ್ ಪ್ರಧಾನಿ ನೆತನ್ಯಾಹು ಕೂಡ ಇರಾನ್‌ ನ ಹೊಸ ನಾಯಕ ಮೊಜ್ತಾಬಾ ಖಮೇನಿ ಅವರಿಗೆ ಎಚ್ಚರಿಕೆ ನೀಡಿದ್ದು, “ಯಾವುದೇ ಭಯೋತ್ಪಾದಕ ಸಂಘಟನೆಯ ನಾಯಕರಿಗೆ ನಾನು ಜೀವ ವಿಮೆ ನೀಡುವುದಿಲ್ಲ” ಎನ್ನುವ ಮೂಲಕ ದಾಳಿಯ ಮುನ್ಸೂಚನೆ ನೀಡಿದ್ದಾರೆ.

ಪ್ರಸ್ತುತ ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿದ್ದು, ಎರಡೂ ದೇಶಗಳ ನಡುವೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ಮುಂದುವರಿಯುತ್ತಿವೆ. ಇದು ಜಾಗತಿಕ ಮಟ್ಟದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version