ಇರಾನ್ ಕ್ಷಿಪಣಿ ಲಾಂಚರ್‌ ಗಳ ಮೇಲೆ ಇಸ್ರೇಲ್ ದಾಳಿ: ಯುದ್ಧ ನಾವೇ ಕೊನೆಗೊಳಿಸುತ್ತೇವೆ | ಟ್ರಂಪ್ ಗೆ ಇರಾನ್ ಸವಾಲು

10/03/2026

ಜೆರೂಸಲೆಮ್/ವಾಷಿಂಗ್ಟನ್: ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತಷ್ಟು ತೀವ್ರಗೊಂಡಿದೆ. ಮಂಗಳವಾರ ಇರಾನ್ ನಡೆಸಿದ ಕ್ಷಿಪಣಿ ದಾಳಿಗೆ ಪ್ರತಿಯಾಗಿ, ಇಸ್ರೇಲ್ ಸೇನೆಯು ಇರಾನ್‌ನ ಕ್ಷಿಪಣಿ ಲಾಂಚರ್‌ಗಳ ಮೇಲೆ ಭೀಕರ ವೈಮಾನಿಕ ದಾಳಿ ನಡೆಸಿದೆ. ಸತತ 11ನೇ ದಿನವೂ ಸಂಘರ್ಷ ಮುಂದುವರಿದಿದ್ದು, ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದೆ.

ಸೋಮವಾರ ತಡರಾತ್ರಿ ಇರಾನ್ ನಡೆಸಿದ ಕ್ಷಿಪಣಿ ಮಳೆಯಿಂದಾಗಿ ಇಸ್ರೇಲ್‌ನ ಹಲವು ನಗರಗಳಲ್ಲಿ ಸೈರನ್ ಮೊಳಗಿದವು, ಜನರು ಸುರಕ್ಷಿತ ಸ್ಥಳಗಳತ್ತ  ಧಾವಿಸಿದರು. ಆದರೆ, ಇಸ್ರೇಲ್‌ನ ಕ್ಷಿಪಣಿ ನಿರೋಧಕ ವ್ಯವಸ್ಥೆಯು ಯಶಸ್ವಿಯಾಗಿ ದಾಳಿಯನ್ನು ತಡೆದಿದ್ದು, ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ದಾಳಿ ನಡೆದ ಕೆಲವೇ ಕ್ಷಣಗಳಲ್ಲಿ ಇಸ್ರೇಲ್ ಸೇನೆಯು ಇರಾನ್‌ನ ಲಾಂಚರ್‌ ಗಳನ್ನು ಧ್ವಂಸಗೊಳಿಸಿದೆ.

ಡೊನಾಲ್ಡ್ ಟ್ರಂಪ್ ಹೇಳಿಕೆ: “ಯುದ್ಧ ಶೀಘ್ರವೇ ಅಂತ್ಯ”

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮಿಯಾಮಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ, “ಅಮೆರಿಕ ಮತ್ತು ಇಸ್ರೇಲ್ ಈ ಯುದ್ಧದಲ್ಲಿ ನಿರ್ಣಾಯಕ ಜಯ ಸಾಧಿಸುತ್ತಿವೆ” ಎಂದು ಘೋಷಿಸಿದ್ದಾರೆ.

ಆಪರೇಷನ್ ಎಪಿಕ್ ಫ್ಯೂರಿ: ಕಳೆದ 9 ದಿನಗಳಲ್ಲಿ ಇರಾನ್‌ ನ 51 ನೌಕೆಗಳನ್ನು ಮುಳುಗಿಸಲಾಗಿದೆ ಮತ್ತು ಅದರ ಡ್ರೋನ್ ಹಾಗೂ ಕ್ಷಿಪಣಿ ಸಾಮರ್ಥ್ಯವನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ಈ ಸಂಘರ್ಷವು ಇನ್ನು ಕೆಲವೇ ದಿನಗಳಲ್ಲಿ ಕೊನೆಗೊಳ್ಳಬಹುದು ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

ಇರಾನ್ ಎಚ್ಚರಿಕೆ: “ತೈಲ ರಫ್ತು ಸ್ಥಗಿತ”

ಟ್ರಂಪ್ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಇರಾನ್‌ ನ ರೆವಲ್ಯೂಷನರಿ ಗಾರ್ಡ್ಸ್ (IRGC), “ಯುದ್ಧದ ಅಂತ್ಯವನ್ನು ನಾವೇ ನಿರ್ಧರಿಸುತ್ತೇವೆ” ಎಂದು ಗುಡುಗಿದೆ. ಅಮೆರಿಕ ಮತ್ತು ಇಸ್ರೇಲ್ ದಾಳಿ ಮುಂದುವರಿಸಿದರೆ, ಈ ಪ್ರದೇಶದಿಂದ ಹನಿಯೂ ತೈಲ ರಫ್ತು ಆಗದಂತೆ ತಡೆಯುವುದಾಗಿ ಇರಾನ್ ಬೆದರಿಕೆ ಹಾಕಿದೆ. ಇದು ಜಾಗತಿಕ ತೈಲ ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿದೆ.

ಪಶ್ಚಿಮ ಏಷ್ಯಾದ ಸಂಘರ್ಷದಿಂದಾಗಿ ಭಾರತದಲ್ಲಿ ಇಂಧನ ಕೊರತೆಯಾಗದಂತೆ ಕೇಂದ್ರ ಪೆಟ್ರೋಲಿಯಂ ಸಚಿವಾಲಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ: ತೈಲ ಸಂಸ್ಕರಣಾಗಾರಗಳಿಗೆ ಎಲ್‌ ಪಿಜಿ (LPG) ಉತ್ಪಾದನೆಯನ್ನು ಹೆಚ್ಚಿಸಲು ಸೂಚಿಸಲಾಗಿದೆ.

ದೇಶೀಯ ಬಳಕೆಗೆ ಆದ್ಯತೆ: ಹೆಚ್ಚುವರಿ ಗ್ಯಾಸ್ ಅನ್ನು ಕೇವಲ ಮನೆಬಳಕೆಗೆ ನೀಡಲು ನಿರ್ಧರಿಸಲಾಗಿದೆ.  ಕಾಳಸಂತೆ ತಡೆಯಲು ಗ್ಯಾಸ್ ಸಿಲಿಂಡರ್ ಬುಕಿಂಗ್ ನಡುವೆ 25 ದಿನಗಳ ಕಡ್ಡಾಯ ಅಂತರವನ್ನು ಜಾರಿಗೆ ತರಲಾಗಿದೆ.

ಪೆಂಟಗನ್ ವೆಚ್ಚದ ಆತಂಕ:

ವರದಿಗಳ ಪ್ರಕಾರ, ಅಮೆರಿಕ ಈ ಯುದ್ಧದ ಮೊದಲ 48 ಗಂಟೆಗಳಲ್ಲಿ ಸುಮಾರು 5.6 ಬಿಲಿಯನ್ ಡಾಲರ್ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಬಳಸಿದೆ. ಇದು ಅಮೆರಿಕದ ಶಸ್ತ್ರಾಸ್ತ್ರ ಸಂಗ್ರಹದ ಮೇಲೆ ಒತ್ತಡ ಉಂಟುಮಾಡಿದ್ದು, ಶ್ವೇತಭವನವು ರಕ್ಷಣಾ ಬಜೆಟ್‌ ಗಾಗಿ ಹತ್ತಾರು ಬಿಲಿಯನ್ ಡಾಲರ್ ಅನುದಾನಕ್ಕೆ ಬೇಡಿಕೆ ಇಡುವ ಸಾಧ್ಯತೆಯಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version