6:59 PM Wednesday 27 - August 2025

ಹೆಚ್ಚಾದ ಚುನಾವಣಾ ರಂಗು: ಪ್ರಚಾರ ಆರಂಭಿಸುತ್ತಿದ್ದಾರೆ ಕಲಿಗಳು!

chamarajja nagara
03/04/2023

ಚಾಮರಾಜನಗರ: ಚುನಾವಣಾ ಕಾವು ಬಿಸಿಲಿನ ತಾಪದಂತೆ ಹೆಚ್ಚಾಗುತ್ತಿದ್ದು ಎಲೆಕ್ಷನ್ ನ ಮೊದಲ ಭಾಗವಾದ ಪ್ರಚಾರಕ್ಕೆ ಹುರಿಯಾಳುಗಳು ಅಧಿಕೃತವಾಗಿ ಎಂಟ್ರಿ ಕೊಡುತ್ತಿದ್ದಾರೆ. ಟೆಂಪಲ್ ರನ್ ಮೂಲಕ ಮತಬೇಟೆ ಆರಂಭಿಸುತ್ತಿದ್ದಾರೆ.

ಮೈಸೂರು ಜಿಲ್ಲೆಯ ನಂಜನಗೂಡು ಕ್ಷೇತ್ರದ ಕೈ ಅಭ್ಯರ್ಥಿ ದರ್ಶನ್ ಧ್ರುವನಾರಾಯಣ ಅವರಿಂದು ತಂದೆ ಹಾಗೂ ಅಜ್ಜ-ಅಜ್ಜಿ ಸಮಾಧಿಗೆ ಪೂಜೆ ಸಲ್ಲಸಿ ಚುನಾವಣಾ ಪ್ರಚಾರ ಆರಂಭಿಸಿದ್ದಾರೆ.
ಚಾಮರಾಜನಗರ ತಾಲೂಕಿನ ಹೆಗ್ಗವಾಡಿ ಗ್ರಾಮಕ್ಕೆ ಬಂದ ದರ್ಶನ್ ತಂದೆ ಧ್ರುವನಾರಾಯಣ ಹಾಗೂ ಅಜ್ಜ-ಅಜ್ಜಿ ಸಮಾಧಿಗೆ ಪೂಜೆ ಸಲ್ಲಿಸಿದ್ದಾರೆ. ಬಳಿಕ, ಗ್ರಾಮದಲ್ಲಿರುವ ಗ್ರಾಮದೇವತೆ ಬೆಳ್ಳಿ ಕಾಣಮ್ಮ ದೇಗುಲ ಮತ್ತು ಚರ್ಚ್ ಗೆ ಗ್ರಾಮಸ್ಥರ ಜೊತೆ ತೆರಳಿ ಪೂಜೆ ಸಲ್ಲಿಸಿದ್ದಾರೆ.

ನಂಜನಗೂಡು ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾಗಿದ್ದ ಧ್ರುವನಾರಾಯಣ ಅವರ ಅಕಾಲಿಕ ಮರಣದಿಂದಾಗಿ ಪುತ್ರ ದರ್ಶನ್ ಗೆ ಟಿಕೆಟ್ ಕೊಟ್ಟಿದ್ದು ಅಧಿಕೃತವಾಗಿ ಇಂದಿನಿಂದ ಚುನಾವಣಾ ಪ್ರಚಾರಕ್ಕೆ ಧ್ರುವ ಪುತ್ರ ಇಳಿದಿದ್ದಾರೆ.

ಇನ್ನು, ಚಾಮರಾಜನಗರ ಜಿಲ್ಲೆಯ ಹನೂರು ಕ್ಷೇತ್ರದ ಕೈ ಅಭ್ಯರ್ಥಿ, ಶಾಸಕ ಆರ್.ನರೇಂದ್ರ ಕೂಡ ಮಲೆಮಹದೇಶ್ಚರ ಬೆಟ್ಟಕ್ಕೆ ತೆರಳಿ ವಿಶೇಷ ಪೂಜೆ ಸಲ್ಲಿಸಿ ಚುನಾವಣಾ ಪ್ರಚಾರ ಆರಂಭಿಸಿದ್ದು ಗೋಪಿನಾಥಂ, ಪುದೂರು, ಮಲೆಮಹದೇಶ್ವರ ಬೆಟ್ಟ ಸೇರಿದಂತೆ ವಿವಿಧ ಗ್ರಾಮಗಳಿಗೆ ಲಗ್ಗೆ ಇಟ್ಟು ಮತಬೇಟೆ ಆರಂಭಿಸಿದ್ದಾರೆ.

ಕೈ-ಕಮಲ ಫೈಟ್ ಜೋರು: ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ಕ್ಷೇತ್ರದ ಕೈ- ಕಮಲ ಅಭ್ಯರ್ಥಿಗಳು ಇಂದಿನಿಂದಲೇ ಪ್ರಚಾರ ಆರಂಭಿಸಿದ್ದು ಜಿದ್ದಾಜಿದ್ದಿನ ಕ್ಷೇತ್ರ ಇಂದಿನಿಂದ ರಂಗಾಗಿದೆ.
ಕಮಲ ಅಭ್ಯರ್ಥಿ, ಶಾಸಕ ನಿರಂಜನಕುಮಾರ್ ಅವರಿಂದು ಗುಂಡ್ಲುಪೇಟೆ ತಾಲೂಕಿನ ಕಂದೇಗಾಲದ ಪಾರ್ವತಿ ಬೆಟ್ಟದಿಂದ ಪ್ರಚಾರ ಆರಂಭಿಸಿದ್ದರೇ ಕೈ ಅಭ್ಯರ್ಥಿ ಗಣೇಶ್ ಪ್ರಸಾದ್ ಗುಂಡ್ಲುಪೇಟೆ ತಾಲೂಕಿನ ಹೊಣಕನಪುರ ಗ್ರಾಮದ ಓಂಕಾರ ಸಿದ್ಧೇಶ್ವರನಿಗೆ ಪೂಜೆ ಸಲ್ಲಿಸಿ ಅಖಾಡಕ್ಕೆ ಇಳಿದಿದ್ದಾರೆ.

ಹನೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಎಲ್ಲರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದು ಕಳೆದ 1 ತಿಂಗಳಿನಿಂದ ಮನೆ-ಮನೆ ಭೇಟಿ, ಪಂಚರತ್ನ ಯೋಜನೆ ಜಾಗೃತಿ ಮೂಡಿಸುತ್ತಿದ್ದಾರೆ. ಕದನ ಕಲಿಗಳ ನಡುವೆ ಶ್ರೀ ಸಾಮಾನ್ಯ ಅಭ್ಯರ್ಥಿಗಳು ಸಾಮಾಜಿಕ ಜಾಲತಾಣದ ಮೂಲಕ ಯುವ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ.

ಕೊಳ್ಳೇಗಾಲದಲ್ಲಿ ಕೈ ಟಿಕೆಟ್, ಚಾಮರಾಜನಗರ, ಹನೂರಿನಲ್ಲಿ ಬಿಜೆಪಿ ಟಿಕೆಟ್, ಜೆಡಿಎಸ್ ನಿಂದ ಕೊಳ್ಳೇಗಾಲ, ಚಾಮರಾಜನಗರ ಟಿಕೆಟ್ ಇನ್ನೂ ಕೂಡ ಫೈನಲ್ ಆಗಬೇಕಿದ್ದು ಟಿಕೆಟ್ ಘೋಷಣೆಯಾದ ಬಳಿಕ ಚುನಾವಣಾ ಕಾದಾಟ ಹೆಚ್ಚಾಗಲಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/DX0jBN1UDJAJ6ORoqqqFkD

ಯೂಟ್ಯೂಬ್ ಚಾನೆಲ್ ಸಬ್ಸ್ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ

Exit mobile version