2:15 PM Saturday 17 - January 2026

ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಇರಿದು ಕೊಂದ ಯುವತಿ

04/01/2021

ಚೆನ್ನೈ: ಅತ್ಯಾಚಾರಕ್ಕೆ ಯತ್ನಿಸಿದ ಕಾಮುಕನನ್ನು ಯುವತಿ ಚಾಕುವಿನಿಂದ ಇರಿದು ಕೊಂದ ಘಟನೆ ತಮಿಳುನಾಡಿನ ತಿರುವಳ್ಳೂರು ಜಿಲ್ಲೆಯ ಶೋಲಾವರಂ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.  ಶೌಚಾಲಯಕ್ಕೆ ಯುವತಿ ಹೋಗಿದ್ದ ಸಂದರ್ಭದಲ್ಲಿ ಕಾಮುಕ ಯುವತಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ.

19 ವರ್ಷದ ಯುವತಿ ಶೋಲಾವರಂನಲ್ಲಿ ಇರುವ ತನ್ನ ಚಿಕ್ಕಮ್ಮನ ಮನೆಗೆ ಬಂದಿದ್ದು, ಸಮೀಪದಲ್ಲೇ ಇರುವ ಕುದುರೆಫಾರಂ ಬಳಿಯಿರುವ ಶೌಚಾಲಯಕ್ಕೆ ತೆರಳಿದ್ದಳು. ಈ ಸಂದರ್ಭದಲ್ಲಿ ಅಲ್ಲಿಗೆ ಕಂಠಪೂರ್ತಿ ಮದ್ಯಪಾನ ಮಾಡಿ ಬಂದಿದ್ದ 26 ವರ್ಷದ ಅಜಿತ್ ಯುವತಿಯನ್ನು ಎಳೆದಾಡಿ ಅತ್ಯಾಚಾರಕ್ಕೆ ಯತ್ನಿಸಿದ್ದನೆನ್ನಲಾಗಿದೆ.

ಯುವತಿ ಈತನ ಕೃತ್ಯಕ್ಕೆ ಪ್ರತಿಭಟಿಸಿದಾಗ ಆತ ಚಾಕು ತೋರಿಸಿ ಬೆದರಿಸಿದ್ದಾನೆ. ಆದರೆ ಯುವತಿ ಆತನನ್ನು ತಳ್ಳಿದ್ದು, ಆತ ಕೆಳಗೆ ಬಿದ್ದಾಗ ತೀವ್ರವಾಗಿ ಆಕ್ರೋಶಗೊಂಡಿದ್ದ ಯುವತಿ, ಆತನ ಕೈಯಿಂದ ಚಾಕು ಕಸಿದುಕೊಂಡು ಕುತ್ತಿಗೆಗೆ ಇರಿದಿದ್ದಾಳೆ.  ಪರಿಣಾಮವಾಗಿ  ಅಜಿತ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಘಟನೆ ಸಂಬಂಧ ಶೋಲಾವರಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಯುವತಿಯಿಂದ ಹೇಳಿಕೆ ಪಡೆಯಲಾಗಿದೆ. ಪ್ರತ್ಯಕ್ಷ ಸಾಕ್ಷಿಗಳು ಇರುವ  ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಮೃತ ಯುವಕ ಯುವತಿಯ ಸಂಬಂಧಿಕನಾಗಿದ್ದಾನೆ ಎಂದು ಇನ್ಸ್ ಪೆಕ್ಟರ್  ನಾಗಲಿಂಗಂ ಹೇಳಿದ್ದಾರೆ.

ಇತ್ತೀಚಿನ ಸುದ್ದಿ

Exit mobile version