ಬೇಸಿಗೆಯ ಬಿಸಿಲು ತಣಿಸಲು ಈರುಳ್ಳಿ ಇಟ್ಟುಕೊಳ್ಳಿ: ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಸಲಹೆ

onion jyotiraditya scindia
27/04/2026

ಮಧ್ಯಪ್ರದೇಶ: ದೇಶದಾದ್ಯಂತ ಬಿಸಿಲ ಬೇಗೆ ದಿನದಿಂದ ದಿನಕ್ಕೆ ಏರುತ್ತಿದೆ. ಈ ನಡುವೆ ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಅವರು ಜನರಿಗೆ ಬಿಸಿಲಿನ ತಾಪದಿಂದ ರಕ್ಷಿಸಿಕೊಳ್ಳಲು ವಿಭಿನ್ನ ಹಾಗೂ ಸಾಂಪ್ರದಾಯಿಕ ಉಪಾಯವೊಂದನ್ನು ಹಂಚಿಕೊಂಡಿದ್ದಾರೆ. “ಜೇಬಿನಲ್ಲಿ ಒಂದು ಈರುಳ್ಳಿಯನ್ನು ಇಟ್ಟುಕೊಳ್ಳಿ, ಅದು ನಿಮ್ಮನ್ನು ಹೀಟ್ ಸ್ಟ್ರೋಕ್‌ ನಿಂದ ಕಾಪಾಡುತ್ತದೆ” ಎಂದು ಅವರು ಸಲಹೆ ನೀಡಿದ್ದಾರೆ.

ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಪಿಚೋರ್‌ ನಲ್ಲಿ ಹೊಸ ತಹಸಿಲ್ ಕಚೇರಿಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಅತಿಯಾದ ಶಾಖವನ್ನು ಎದುರಿಸಲು ಹಳೆಯ ಕಾಲದ ಆಯುರ್ವೇದ ಅಥವಾ ಗ್ರಾಮೀಣ ಪದ್ಧತಿಗಳನ್ನು ಮರೆಯಬಾರದು ಎಂದರು. ವೇದಿಕೆಯ ಮೇಲೆಯೇ ತಮ್ಮ ವಾಹನದಿಂದ ತರಿಸಿದ ಈರುಳ್ಳಿಯೊಂದನ್ನು ಪ್ರದರ್ಶಿಸಿ ಸಾರ್ವಜನಿಕರಿಗೆ ಅಚ್ಚರಿ ಮೂಡಿಸಿದರು.

ತಮ್ಮ ಜೀವನಶೈಲಿಯ ಬಗ್ಗೆ ಮಾತನಾಡಿದ ಸಚಿವರು, “ನಾನು ನನ್ನ ಕಾರಿನಲ್ಲಿ ಎಸಿ (Air Conditioning) ಬಳಸುವುದಿಲ್ಲ, ಕಚೇರಿಯಲ್ಲೂ ಎಸಿ ಕೆಳಗೆ ಕೂರುವುದಿಲ್ಲ. ಇದು ‘ಚಂಬಲ್ ಚರ್ಮ’ (Chambal Skin). ಮೇ ಮತ್ತು ಜೂನ್ ತಿಂಗಳಿನ 51 ಡಿಗ್ರಿ ತಾಪಮಾನದಲ್ಲೂ ನಾನು ಹೀಗೆಯೇ ಇರುತ್ತೇನೆ. ನನ್ನ ಮುಖ ನೋಡಲು ಯುವಕನಂತೆ ಕಂಡರೂ, ನನ್ನ ಆತ್ಮ ಮಾತ್ರ ಹಳೆಯ ಸಂಪ್ರದಾಯಗಳಿಗೆ ಒಗ್ಗಿಕೊಂಡಿದೆ” ಎಂದು ಲಘು ದಾಟಿಯಲ್ಲಿ ಹೇಳಿದರು.

ಬಿಸಿಲಿನಲ್ಲಿ ಓಡಾಡುವಾಗ ಜೇಬಿನಲ್ಲಿ ಒಂದು ಸಣ್ಣ ಈರುಳ್ಳಿಯನ್ನು ಇಟ್ಟುಕೊಳ್ಳುವುದು ಅತ್ಯಂತ ಹಳೆಯ ಮತ್ತು ಪರಿಣಾಮಕಾರಿ ಮಾರ್ಗ. ಇದು ದೇಹಕ್ಕೆ ತಂಪು ನೀಡುತ್ತದೆ ಎಂದು ಅವರು ಪ್ರತಿಪಾದಿಸಿದರು. ಆಧುನಿಕ ಕಾಲದಲ್ಲಿ ಎಲ್ಲರೂ ಎಸಿ ಮತ್ತು ತಂತ್ರಜ್ಞಾನದ ಹಿಂದೆ ಬಿದ್ದಿದ್ದೇವೆ, ಆದರೆ ಹಳೆಯ ಕಾಲದ ಇಂತಹ ಮನೆಮದ್ದುಗಳು ಆರೋಗ್ಯಕ್ಕೆ ಹಿತಕಾರಿ ಎಂದು ತಿಳಿಸಿದರು.

ಪ್ರಸ್ತುತ ಮಧ್ಯ ಭಾರತದ ಹಲವು ಭಾಗಗಳಲ್ಲಿ ತಾಪಮಾನವು 45 ಡಿಗ್ರಿ ಸೆಲ್ಸಿಯಸ್‌ಗಿಂತ ಹೆಚ್ಚಿದೆ. ಹವಾಮಾನ ಇಲಾಖೆಯು ಮುಂಬರುವ ದಿನಗಳಲ್ಲಿ ‘ಹೀಟ್ ವೇವ್’ (ಶಾಖದ ಅಲೆ) ತೀವ್ರಗೊಳ್ಳುವ ಬಗ್ಗೆ ಎಚ್ಚರಿಕೆ ನೀಡಿದೆ. ಇಂತಹ ಸಂದರ್ಭದಲ್ಲಿ ಸಚಿವರ ಈ ‘ಈರುಳ್ಳಿ ಮಂತ್ರ’ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ

Exit mobile version