ಇದು ನಿಜವಾದ ಕೇರಳ ಸ್ಟೋರಿ: ಮನೆಯವರ ವಿರೋಧದ ನಡುವೆಯೇ ಫರ್ಮಾನ್ ಖಾನ್ ನನ್ನು ಮದುವೆಯಾದ ಕುಂಭಮೇಳದ ಮೋನಾಲಿಸಾ
ತಿರುವನಂತಪುರಂ: ಪ್ರಯಾಗ್‌ರಾಜ್ ಕುಂಭಮೇಳದ ವೇಳೆ ಗಾಜಿನ ಬಳೆ ಹಾಗೂ ಹೂವಿನ ಹಾರ ಮಾರಾಟ ಮಾಡುತ್ತಾ, ತಮ್ಮ ಸೌಂದರ್ಯದಿಂದ ಸಾಮಾಜಿಕ ಜಾಲತಾಣಗಳಲ್ಲಿ ರಾತ್ರೋರಾತ್ರಿ ಪ್ರಸಿದ್ಧಿ ಪಡೆದಿದ್ದ ಮೋನಾಲಿಸಾ ಭೋಂಸ್ಲೆ (Monalisa Bhosle), ಕೇರಳದ ದೇವಸ್ಥಾನವೊಂದರಲ್ಲಿ ಪೊಲೀಸ್ ರಕ್ಷಣೆಯೊಂದಿಗೆ ತಾವು ಇಷ್ಟಪಟ್ಟ ಯುವಕನೊಂದಿಗೆ ವಿವಾಹವಾಗಿದ್ದಾರೆ.
ಪೋಷಕರ ವಿರೋಧದ ನಡುವೆಯೂ ಇಂದೋರ್ ಮೂಲದ ಮೋನಾಲಿಸಾ ಮತ್ತು ಮಹಾರಾಷ್ಟ್ರದ ನಟ ಫರ್ಮಾನ್ ಖಾನ್ ಪರಸ್ಪರ ಪ್ರೀತಿಸಿ ಮದುವೆಯಾಗಿದ್ದಾರೆ. ಕೇರಳದ ಪೂವರ್ ಎಂಬಲ್ಲಿರುವ ಅರುಮನೂರು ದೇವಸ್ಥಾನದಲ್ಲಿ ಕೇರಳ ಶೈಲಿಯ ಸಂಪ್ರದಾಯದಂತೆ ವಿವಾಹ ನೆರವೇರಿತು.
ಈ ಪ್ರೇಮ ವಿವಾಹಕ್ಕೆ ಮೋನಾಲಿಸಾ ಅವರ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು. ಇದರಿಂದಾಗಿ ದಂಪತಿಗಳು ತಿರುವನಂತಪುರಂನ ತಂಪನೂರು ಪೊಲೀಸ್ ಠಾಣೆಗೆ ತೆರಳಿ ರಕ್ಷಣೆ ಕೋರಿದ್ದರು. ಯುವತಿ ವಯಸ್ಕಳಾಗಿರುವುದರಿಂದ ತನ್ನ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕಿದೆ ಎಂದು ಪೊಲೀಸರು ಆಕೆಯ ತಂದೆಗೆ ಮನವರಿಕೆ ಮಾಡಿಕೊಟ್ಟು, ಪೊಲೀಸ್ ರಕ್ಷಣೆಯಲ್ಲಿ ಮದುವೆ ಮಾಡಿಸಿದ್ದಾರೆ.
ಮದುವೆಯ ನಂತರ ಮಾತನಾಡಿದ ವರ ಫರ್ಮಾನ್ ಖಾನ್, “ಕೇರಳದಲ್ಲಿ ಎಲ್ಲರೂ ಸಾಮರಸ್ಯದಿಂದ ಬದುಕುತ್ತಾರೆ, ಇಲ್ಲಿ ಯಾವುದೇ ಭೇದಭಾವವಿಲ್ಲ. ಹಾಗಾಗಿ ನಾವು ಇಲ್ಲೇ ಮದುವೆಯಾಗಲು ನಿರ್ಧರಿಸಿದೆವು ಮತ್ತು ಕೇರಳದಲ್ಲೇ ನೆಲೆಸಲು ಯೋಜಿಸಿದ್ದೇವೆ,” ಎಂದು ತಿಳಿಸಿದ್ದಾರೆ.
ಈ ಮದುವೆ ಸಮಾರಂಭದಲ್ಲಿ ಕೇರಳದ ಶಿಕ್ಷಣ ಸಚಿವ ವಿ. ಶಿವನ್ ಕುಟ್ಟಿ ಮತ್ತು ಸಿಪಿಎಂ ರಾಜ್ಯ ಕಾರ್ಯದರ್ಶಿ ಎಂ.ವಿ. ಗೋವಿಂದನ್ ಸೇರಿದಂತೆ ಹಲವು ರಾಜಕೀಯ ಗಣ್ಯರು ಭಾಗವಹಿಸಿ ನವಜೋಡಿಗೆ ಹರಸಿದರು. ಸಚಿವ ಶಿವನ್ ಕುಟ್ಟಿ ಅವರು, “ಜನರು ಮುಕ್ತವಾಗಿ ಬದುಕಲು ಸಾಧ್ಯವಿರುವ ನಿಜವಾದ ಕೇರಳದ ಕಥೆ ಇದು,” ಎಂದು ಬಣ್ಣಿಸಿದ್ದಾರೆ.
ಮೋನಾಲಿಸಾ ಅವರು ಕುಂಭಮೇಳದ ವಿಡಿಯೋ ವೈರಲ್ ಆದ ನಂತರ ಕಿರುತೆರೆ ಮತ್ತು ಸಿನಿಮಾ ಕ್ಷೇತ್ರದಲ್ಲೂ ಅವಕಾಶಗಳನ್ನು ಪಡೆದುಕೊಂಡಿದ್ದರು. ಸದ್ಯ ಇವರಿಬ್ಬರೂ ಸಿನಿಮಾವೊಂದರ ಚಿತ್ರೀಕರಣಕ್ಕಾಗಿ ಕೇರಳಕ್ಕೆ ಬಂದಿದ್ದಾಗ ಈ ವಿವಾಹ ನಡೆದಿದೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/H1duNIQRfXnJcfQKWPzNqD























