ಕಾಂಗ್ರೆಸ್ ಸರ್ಕಾರದಿಂದ ಬೆಳೆ ವಿಮೆ ಲೂಟಿ: ಸಂಸದ ಬ್ರಿಜೇಶ್ ಚೌಟ ಗಂಭೀರ ಆರೋಪ - Mahanayaka
7:56 PM Tuesday 17 - November 2026

ಕಾಂಗ್ರೆಸ್ ಸರ್ಕಾರದಿಂದ ಬೆಳೆ ವಿಮೆ ಲೂಟಿ: ಸಂಸದ ಬ್ರಿಜೇಶ್ ಚೌಟ ಗಂಭೀರ ಆರೋಪ

mp brijesh chowta
10/10/2026

ಮಂಗಳೂರು: ರಾಜ್ಯದ ಕಾಂಗ್ರೆಸ್ ಸರ್ಕಾರ ಲೂಟಿ ಮತ್ತು ದಂದೆಯಲ್ಲಿ ತೊಡಗಿದ್ದು, ರೈತರಿಗೆ ತಲುಪಬೇಕಾದ ಬೆಳೆ ವಿಮೆ ಪರಿಹಾರ ಮೊತ್ತವನ್ನೂ ಕಸಿದುಕೊಂಡಿದೆ ಎಂದು ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ ಗಂಭೀರ ಆರೋಪ ಮಾಡಿದ್ದಾರೆ.

ಅಡಿಕೆ ಹಾಗೂ ಇತರೆ ಬೆಳೆಗಾರರಿಗೆ ಬೆಳೆ ವಿಮೆ ಪರಿಹಾರದಲ್ಲಿ ಆಗಿರುವ ಅನ್ಯಾಯವನ್ನು ಖಂಡಿಸಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ‘ಹಕ್ಕುಒತ್ತಾಯ ಸಭೆ’ಯಲ್ಲಿ ಅವರು ಮಾತನಾಡಿದರು.

“2023ರ ವರೆಗೆ ರೈತರಿಗೆ ಸರಿಯಾಗಿ ಸಿಗುತ್ತಿದ್ದ ಬೆಳೆ ಪರಿಹಾರ ಮೊತ್ತ, ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ತಕ್ಷಣವೇ ದಿಢೀರ್ ಕಡಿಮೆಯಾಗಲು ಕಾರಣವೇನು? ಎಂಬುದಕ್ಕೆ ರಾಜ್ಯ ಸರ್ಕಾರ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಉತ್ತರಿಸಬೇಕು” ಎಂದು ಸಂಸದರು ಆಗ್ರಹಿಸಿದರು.

ಅಲ್ಲದೆ, ಕಾಂಗ್ರೆಸ್ ಸರ್ಕಾರ ಬಂದ ಕೂಡಲೇ ಪಿಎಂ ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ರಾಜ್ಯದ ಪಾಲಿನ ಧನಸಹಾಯವನ್ನು ನಿಲ್ಲಿಸಲಾಯಿತು. ಅದೇ ರೈತ ವಿರೋಧಿ ಧೋರಣೆಯನ್ನು ಮುಂದುವರಿಸಿಕೊಂಡು ಬಂದಿರುವ ಸರ್ಕಾರ, ಈಗ ಬೆಳೆ ವಿಮೆಯಲ್ಲೂ ಅನ್ಯಾಯ ಎಸಗಿದೆ. ಈ ವಿಷಯವನ್ನು ಕೇಂದ್ರ ಸರ್ಕಾರದ ಗಮನಕ್ಕೂ ತರಲಾಗುವುದು ಎಂದು ಅವರು ಹೇಳಿದರು.

₹1,500 ಕೋಟಿ ಕಿಕ್ಬ್ಯಾಕ್ ಆರೋಪ: ಶಾಸಕ ಹರೀಶ್ ಪೂಂಜ

ಸಭೆಯನ್ನುದ್ದೇಶಿಸಿ ಮಾತನಾಡಿದ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ, “ಪ್ರತಿ ಜಿಲ್ಲೆಯಲ್ಲಿ ಕನಿಷ್ಠ 50 ಕೋಟಿ ರೂಪಾಯಿಯಂತೆ ರಾಜ್ಯಾದ್ಯಂತ ಒಟ್ಟು ₹1,500 ಕೋಟಿ ಭ್ರಷ್ಟಾಚಾರ ಬೆಳೆ ವಿಮೆಯಲ್ಲಿ ನಡೆದಿದೆ” ಎಂದು ಆರೋಪಿಸಿದರು.

2023ರಲ್ಲಿ ಅಧಿಕಾರಕ್ಕೆ ಬಂದ ತಕ್ಷಣ ಕಾಂಗ್ರೆಸ್ ಸರ್ಕಾರ ‘ಟರ್ಮ್ ಶೀಟ್’ (ಷರತ್ತುಗಳು) ಬದಲಾಯಿಸಿದ್ದರಿಂದ ವಿಮಾ ಕಂಪೆನಿಗಳಿಂದ ಸರ್ಕಾರ ಕಿಕ್ಬ್ಯಾಕ್ ಪಡೆದಿದೆ ಮತ್ತು ರೈತರಿಗೆ ತೀವ್ರ ಅನ್ಯಾಯವಾಗಿದೆ. ಕೂಡಲೇ ಹಳೆಯ ಟರ್ಮ್ ಶೀಟ್‌ ನ್ನೇ ಜಾರಿಗೆ ತರಬೇಕು ಹಾಗೂ ರಾಜ್ಯ ಸರ್ಕಾರ ತನ್ನ ಪಾಲಿನ ಪ್ರೀಮಿಯಂ ಮೊತ್ತವನ್ನು ತಕ್ಷಣ ಬಿಡುಗಡೆ ಮಾಡಬೇಕು ಎಂದು ಪೂಂಜ ಒತ್ತಾಯಿಸಿದರು.

ಸಭೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ಮಾಜಿ ಶಾಸಕರಾದ ಸಂಜೀವ ಮಠಂದೂರು, ಪದ್ಮನಾಭ ಕೊಟ್ಟಾರಿ, ಮಾಜಿ ಎಂಎಲ್‌ ಸಿ ಪ್ರತಾಪಸಿಂಹ ನಾಯಕ್ ಸೇರಿದಂತೆ ಪ್ರಮುಖ ನಾಯಕರು ಪಾಲ್ಗೊಂಡಿದ್ದರು.

ಸಹಕಾರಿ ಭಾರತಿ ಜಿಲ್ಲಾಧ್ಯಕ್ಷ ಸುಧಾಕರ ರೈ, ಎಸ್‌ ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಲಪ್ಪ ಗೌಡ ಪೂವಾಜೆ, ರೈತ ಮೋರ್ಚಾ ಜಿಲ್ಲಾಧ್ಯಕ್ಷ ಗಣೇಶ ಗೌಡ ಬೆಳ್ತಂಗಡಿ ಹಾಗೂ ವಿವಿಧ ಮಂಡಲಗಳ ಅಧ್ಯಕ್ಷರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ ಸ್ವಾಗತಿಸಿ, ಸುನಿಲ್ ಕುಮಾರ್ ದಡ್ಡು ಪ್ರಸ್ತಾವನೆ ಮಂಡಿಸಿದರು. ರಾಕೇಶ್ ರೈ ಕಾರ್ಯಕ್ರಮ ನಿರೂಪಿಸಿದರು.

ಇತ್ತೀಚಿನ ಸುದ್ದಿ