ಮೂಡಿಗೆರೆ: ಅಗತ್ಯ ವಸ್ತು ಖರೀದಿಸುತ್ತಿದ್ದ ಮಹಿಳೆಗೆ ಲಾಠಿಯಿಂದ ಹೊಡೆದು ಕೈ ಮುರಿದ ಗ್ರಾಮಲೆಕ್ಕಿಗ

moodigere
25/05/2021

ಮೂಡಿಗೆರೆ:  ಮಹಾಮಾರಿ ಕೊರೊನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸರ್ಕಾರ ಜಾರಿ ಮಾಡಿರುವ  ಲಾಕ್ ಡೌನ್ ವೇಳೆ ಲಾಠಿಗೆ ಬೆಲೆ ಇಲ್ಲದ ಪರಿಸ್ಥಿತಿ ಬಂದೊದಗಿದೆ. ಸಾರ್ವಜನಿಕರನ್ನು ನಿಯಂತ್ರಿಸಲು ಪೊಲೀಸರು ಹಿಡಿಯುತ್ತಿದ್ದ ಲಾಠಿಯನ್ನು ಕಂಡಕಂಡವರು ಹಿಡಿದುಕೊಂಡು ಸಾರ್ವಜನಿಕರನ್ನು ಬೆದರಿಸುತ್ತಿದ್ದಾರೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಬಿಜೆಪಿ ಗ್ರಾಮಪಂಚಾಯತ್ ಸದಸ್ಯರು, ಅಧ್ಯಕ್ಷರು ಲಾಠಿ ಹಿಡಿದುಕೊಂಡು ಹೊರ ಬಂದು ಸಾರ್ವಜನಿಕರನ್ನು ನಿಯಂತ್ರಿಸುತ್ತೇವೆ ಎಂದು ಹೊರಡುತ್ತಿದ್ದಾರೆ. ಸಾರ್ವಜನಿಕರಿಗೆ ಹಲ್ಲೆ ಮಾಡುವ ಅಧಿಕಾರ ಇವರಿಗೆ ನೀಡಿದವರು ಯಾರು? ಎನ್ನುವ ಪ್ರಶ್ನೆಗಳು ಕೇಳಿ ಬಂದಿದೆ. ಇದರ ಜೊತೆಗೆ ಗ್ರಾಮಪಂಚಾಯತ್ ಸದಸ್ಯರು ಅಧ್ಯಕ್ಷರು ಕೆಲವು ಭಾಗದಲ್ಲಿ ಟ್ರಾಫಿಕ್ ಪೊಲೀಸರಂತೆ ರಸ್ತೆಬದಿಯಲ್ಲಿನಿಂತು ಸಾರ್ವಜನಿಕರಿಗೆ ದಂಡ ಹಾಕುವ ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇನ್ನೂ ಮೂಡಿಗರೆಯಲ್ಲಿ ನಡೆದ ಘಟನೆಯೊಂದು ಇದೀಗ ವ್ಯಾಪಕ ಚರ್ಚೆಯಾಗುತ್ತಿದೆ. ಗ್ರಾಮ ಲೆಕ್ಕಾಧಿಕಾರಿಯೊಬ್ಬ, ಅಗತ್ಯ ಸಾಮಗ್ರಿ ಕೊಂಡುಕೊಳ್ಳುತ್ತಿದ್ದ ಮಹಿಳೆಯ  ಮೇಲೆ ಲಾಠಿಯಿಂದ ಹಲ್ಲೆ ನಡೆಸಿರುವ ಘಟನೆ ನಡೆದಿದ್ದು, ಪರಿಣಾಮವಾಗಿ ಮಹಿಳೆಯ ಕೈ ಮುರಿದು ಹೋಗಿದೆ ಎಂದು ಸುದ್ದಿವಾಹಿನಿ ವರದಿ ಮಾಡಿದೆ.

ಲಾಕ್ ಡೌನ್ ಹಿನ್ನೆಲೆಯಲ್ಲಿ 8 ಗಂಟೆಯ ವೇಳೆಗೆ ಅಂಗಡಿ ಮುಂದೆ ಮಹಿಳೆ ಅಗತ್ಯ ವಸ್ತುಗಳನ್ನು ಖರೀದಿ ಮಾಡುತ್ತಿದ್ದರು. ಈ ವೇಳೆ ಗ್ರಾಮ ಲೆಕ್ಕಿಗ ಏಕಾಏಕಿ  ಬೈಕ್ ನಲ್ಲಿ ಬಂದು ಅವಾಚ್ಯ ಶಬ್ಧಗಳಿಂದ ನಿಂದಿಸುತ್ತಾ, ಮಹಿಳೆಯ ಕೈಗೆ ಲಾಠಿ ಬೀಸಿದ್ದು, ಪರಿಣಾಮವಾಗಿ ಮಹಿಳೆಯ ಕೈಯ ಮೂಳೆ ಮುರಿತಕ್ಕೊಳಗಾಗಿದೆ ಎಂದು ಹೇಳಲಾಗಿದೆ.

ಸಂತ್ರಸ್ತ ಮಹಿಳೆ ತನ್ನ ಪತಿಯನ್ನು ಕಳೆದುಕೊಂಡು ವಿಧವೆಯಾಗಿದ್ದು, ತಮ್ಮ ನಾಲ್ಕು ಮಕ್ಕಳನ್ನು ಅವರಿವರ ಮನೆಯಲ್ಲಿ ಪಾತ್ರೆ ತೊಳೆದು, ಕೆಲಸ ಮಾಡುತ್ತಾ ಸಾಕುತ್ತಿದ್ದರು. ಆದರೆ, ಲಾಠಿ ಹಿಡಿಯುವ ಅಧಿಕಾರವೇ ಇಲ್ಲದ ಗ್ರಾಮ ಲೆಕ್ಕಿಗ ಗಿರೀಶ್ ಎಂಬಾತ ಮಹಿಳೆಯ ಕೈಯನ್ನು ಮುರಿದು ಹಾಕಿದ್ದಾನೆ. ಮಹಿಳೆಯರಿಗೆ ರಸ್ತೆಯಲ್ಲಿ ಹಲ್ಲೆ ನಡೆಸಲು ಗಿರೀಶ್ ಯಾರು? ಎನ್ನುವ ಪ್ರಶ್ನೆಗಳು ವ್ಯಾಪಕ ಕೇಳಿ ಬಂದಿವೆ.

YouTube video player

ಇತ್ತೀಚಿನ ಸುದ್ದಿ

Exit mobile version